Wednesday, May 12, 2010

ನಿನ್ನ ಸವಿನೆನಪೇ..

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ..

ನಿನಗೋಸ್ಕರ ಬರೆದಿರೋ ನನ್ನ ಡೈರಿಯಲ್ಲಿ ಮೊದಲ ಪುಟದ ಮೊದಲ ಪದಗಳಿವು. ಈ ಹಾಡು ಮೊದಲಿನಿಂದನೂ ಇಷ್ಟ ಆಗ್ತಾ ಇತ್ತು. ಅಮ್ಮ ಹೇಳಿ ಕೊಟ್ಟಿರೋ ಹಾಡು ಇದು. ನೀನು ಬಂದ ಮೇಲೆ ಇನ್ನು ಜಾಸ್ತಿ ಇಷ್ಟ ಆಗ್ತಿದೆ. ನಿನಗೋಸ್ಕರ ಯಾವಾಗಲೂ ಹಾಡಬೇಕು ಅನ್ಸುತ್ತೆ. ಬೆಳಿಗ್ಗೆ ಗಡಿಬಿಡಿಯಲ್ಲಿ ನಿಂಗೆ ಸರಿಯಾಗಿ bye ಹೇಳೋಕ್ಕೂ ಆಗ್ಲಿಲ್ಲ. ಆಫೀಸಿಗೆ ಬಂದು ಅದೇ ಯೋಚನೆಯಲ್ಲಿ ಬೇಜಾರಾಗ್ತಾ ಇರುತ್ತೆ. ಏನಾದ್ರು ಬರೆಯೋಣ ಅಂದ್ರೆ ನಿನ್ನ ವಿಷಯ ಬಿಟ್ರೆ ಬೇರೆ ಏನು ಸಿಗಲ್ಲ. ನಿಂಗೊತ್ತಾ ನಿನ್ನ ಬಗ್ಗೆ ಬರೆಯೋದೇ ನಂಗಿಷ್ಟ. ನೆನಪಿದೆಯ ನಿಂಗೆ? ಅವತ್ತು ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಇಬ್ರು ಕೂತ್ಕೊಂಡು ಮಾತಾಡ್ತಾ ಇದ್ದಿದ್ದು? ಮಾತಾಡೋಕ್ಕೆ ಆಗ್ತಿರ್ಲಿಲ್ಲ ನನ್ನಿಂದ. ಗಂಟಲು ಕಟ್ಟಿ ಬಂದು ಹೇಳಬೇಕಗಿರೋದನ್ನೆಲ್ಲ ನುಂಗಿದ್ದೆ. ಅವತ್ತೇ ಕೊನೆ ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಕೂತ್ಕೊಂಡಿದ್ದು. ನಂತರ ಒಂದು ದಿನ ನೀನು ಪಕ್ಕದಲ್ಲೇ ಪಿಸುಗುಟ್ಟಿದ್ದೆ, ಇನ್ಮುದೆ ಚೆನ್ನೈಗೆ ಹೋಗೋ ಹಾಗಿಲ್ಲ ಅಂತ. ಅವತ್ತೇ ನಾನು ತೀರ್ಮಾನ ಮಾಡಿದ್ದು, ಇನ್ಮುಂದೆ ನಮ್ಮ ಮಧ್ಯ ದೂರ ಅನ್ನೋದೇ ಬರಬಾರದು ಅಂತ. ನಿನ್ನ ಸಾಮಿಪ್ಯವೇ ನನ್ನ ನೆಮ್ಮದಿ.

ಆಮೇಲೆ ನೀನು ಇಲ್ಲಿಗೆ ಬಂದ ನಂತರ ಡೈರಿ ಬರೆಯೋದೇ ನಿಂತೋಗಿದೆ!! ಒಂದ್ಸಲನಾದ್ರೂ ಕುತೂಹಲಕ್ಕೆ ನನ್ನ ಡೈರಿನ ನೋಡಿದಿಯ ಏನಾದ್ರು ಬರೆದಿದ್ದಿನ ಅಂತ? ಅದೇನೋ ಅಲ್ಪ ಸ್ವಲ್ಪ ಬರೆದಿರಬಹುದು. ಈಗ life ಅನ್ನೋದು busy ಆಗೋಗಿದೆ. ಬರೆಯೋದಿರಲಿ, ಓದೋದಕ್ಕೂ ಟೈಮ್ ಸಾಕಾಗ್ತಿಲ್ಲ. ಆದ್ರೆ ನೀನು ನನ್ನ ಹತ್ತಿರ ಇದ್ದೀಯ ಅನ್ನೋ ಭಾವನೆನೇ ಖುಷಿ ಕೊಡುತ್ತೆ. ಏನೇ ಕೆಲಸ ಮಾಡ್ತಾ ಇದ್ರುನು ನೀನು ಪಕ್ಕ ಇರ್ಬೇಕು ಅನ್ಸುತ್ತೆ. ಆದ್ರೆ ಆಫೀಸ್ನಲ್ಲಿ ವಿಧಿಯಿಲ್ಲ. ಅದ್ಕೆ ನೀನು ತುಂಬ ನೆನಪಾಗ್ತಾ ಇರ್ತಿಯ. ಅವಾಗ್ಲೇ ಈ ಹಾಡು ಕೂಡ ನೆನಪಾಗೋದು. 

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ.. 

ತುಂಬ ನೆನಪಾಗ್ತಾ ಇದ್ದೀಯ..  

Tuesday, May 11, 2010

ಜೀವನ..

ಸಂಭಂದದ ಎಳೆಗಳು ಎಲ್ಲಿ ಜೋಡಣೆಯಾಗುವುದೋ, ಎಲ್ಲಿ ಎಳೆ ಸಡಿಲವಾಗಿ ಬಿಚ್ಚಿಕೊಳ್ಳುವುದೋ ಯಾರೂ ಮುಂದಾಗಿ ತಿಳಿಯಲಾರರು. ಬೇಡವಾಗಿರುವ ಸಂಭಂದಗಳನ್ನು ಸುಲಭದಲ್ಲಿ ಕಿತ್ತೆಸೆಯಬಹುದು. ಆದರೆ ಬೇಕೇ ಬೇಕಾಗಿರುವ ಸಂಭಂದಗಳನ್ನು ಅಷ್ಟು ಸುಲಭದಲ್ಲಿ ಮುರಿಯಲಾಗುವುದಿಲ್ಲ. ಮನಸು ಕೇಳದು. ಆದರೆ ಜೀವನದ ಕೆಲವು ಕ್ಲಿಷ್ಟ ಸಂದರ್ಭಗಳು ಇವೆಲ್ಲವನ್ನೂ ನಮ್ಮಿಂದ ಮಾಡಿಸುತ್ತದೆ. ಮುಂದೆ ಜೀವನ ನಡೆಯಬೇಕಾದರೆ ಕೆಲವು ತ್ಯಾಗ, ಕೆಲವು ಹೊಂದಾಣಿಕೆ ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ. ಜೀವನದಲ್ಲಿ ಊಹಿಸಲಾಗದ ತಿರುವುಗಳು ಬದುಕಿನ ದಾರಿಯನ್ನೇ ಬದಲಿಸಿ, ಮುಂದೇನಾಗುವುದು ಎಂಬ ಅತಿ ದೊಡ್ಡ ಪ್ರಶ್ನಾರ್ತಕ ಚಿನ್ಹೆಯನ್ನು ನಮ್ಮೆದುರು ತಂದಿಡುವುದು. ಆಗಲೇ ಎಲ್ಲವು uncertain ಅನ್ನಿಸೋಕೆ ಶುರುವಾಗುವುದು.

ಇದೆ ಜೀವನ. ಹೊಸ ಸಂಬಂಧದಲ್ಲಿ ಅರ್ಥ ಹುಡುಕಿ ಬದುಕೋದೇ ಮುಂದಿನ ಹೊಸ ದಾರಿಯಲ್ಲಿ ಅಳವಡಿಸಿಕೊಳ್ಳಬೇಕಾದುದು. ಪ್ರತಿಯೊಂದು ದಾರಿಗೂ ಅದರದ್ದೇ ಆದ ವಿಶಿಷ್ಟವಾದ ಗುರಿ. ಹೊಸ ಹಾದಿಯಲ್ಲೂ ಕೂಡ ಹೂವುಗಳಿರುವುದು. ಹಕ್ಕಿಗಳ ಚಿಲಿಪಿಲಿಗಳಿರುವುದು. ಹೊಸ ಅನುಭವಗಳಿರುವುದು. ಹೊಸ ನಗು ಇರುವುದು. ಹೊಸ ಆಸೆ, ಹೊಸ ಬಯಕೆ, ಸಂತೋಷ, ಸಡಗರ, ಹೊಸ ಗೆಳೆತನ ಇರುವುದು. ಮನಸು ಬಿಚ್ಚಿ ಭಾವನೆ ಹಂಚಿಕೊಳ್ಳಲು ಪ್ರೀತಿ ಪಾತ್ರರದವರೂ ಸಿಗುವರು. ಯಾರಿಗ್ಗೊತ್ತು, ಎಲ್ಲಿಯೂ ಸಿಗದ ಅಮೂಲ್ಯ ಪ್ರೀತಿ ಇಲ್ಲಿಯೇ ಸಿಗುವುದು. ವಿಷಾದಗಳೆಲ್ಲವನ್ನೂ ಕಟ್ಟಿಟ್ಟು, ಹೊಸ ಜೀವನಕ್ಕೆ, ಹೊಸ ಪ್ರೀತಿಗೆ ಮೈ ಒಡ್ಡಿ, ಹೊಸ ಗುರಿಗಳೊಂದಿಗೆ ಮುಂದುವರೆಯುವುದೇ ಬದುಕು.