
ನಿನ್ನನ್ನು ನೆನೆಸುವ ಇನ್ನೊಂದು ದಿನ ಕಣ್ಣ ಮುಂದೆ. ನೀನಿಲ್ಲದೆ ಹೇಗೆ ಕಳೆಯಲಿ ಎಂದು ಇಂದಾದರೂ ತಿಳಿಸುವೆಯಾ?
ನಾವು ಕೈಬೆಸೆದು ನಡೆದ ಹಾದಿಯಲ್ಲಿ ನಿನ್ನ ಹೆಜ್ಜೆ ಗುರುತುಗಳನ್ನು ಹುಡುಕುತ್ತಿರುವೆ. ಕೈಗಳಲಿ ನಿನ್ನ ಬೆಚ್ಚನೆಯ ಕೈಹಿಡಿತದ ಬಿಸಿಯನ್ನು ಅರಸುತ್ತಿರುವೆ. ನನ್ನಲ್ಲಿ ಇರುವುದು ಮೂರೇ ಮೂರು ಆಸ್ತಿ. ನಿಂಜೊತೆ ಕಳೆದ ಕ್ಷಣಗಳು, ನೀನಿಲ್ಲದೆ ಒಂಟಿಯಾಗಿ ಕಳೆದ ಕ್ಷಣಗಳು, ಹಾಗೂ ಎದೆ ತಾಕಿದ ನಿನ್ನ ಪ್ರೀತಿ. ಪ್ರೀತಿ ಎದೆಯಾಳದಲ್ಲಿ ಬೇರೂರಿ ಹೆಮ್ಮರವಾಗಿ ಬೆಳೆದಿದೆ, ನಿನ್ನ ಪ್ರೀತಿ ಮಳೆಹನಿಯಲ್ಲಿ ಇನ್ನೂ ಬೆಳೆಯುತ್ತಿದೆ. ಒಂಟಿಯಾಗಿ ಕಳೆದ ಕ್ಷಣಗಳಲ್ಲಿ ನೀನಿಲ್ಲವೆಂದುಕೊಳ್ಳಬೇಡ. ನನ್ನಲ್ಲಿರುವುದು ಬರೀ ನೀನು. ಇರುವ ಒಂದು ಕೊರತೆಯೆಂದರೆ, ನಿನ್ನ ನೆನೆಸಿಕೊಳ್ಳದ ಕ್ಷಣಗಳ ಕೊರತೆ. ನಿನ್ನ ಹೆಜ್ಜೆಗುರುತಿನ ಹುಡುಕಾಟ ನಡೆಸುವಾಗಲೂ, ನೀನೂ ಕೂಡ ನನ್ನೊಡನೆ ಹುಡುಕುತ್ತಿದ್ದಿಯ ಅನಿಸುತ್ತದೆ. ಕಾಣದ ನಿನ್ನನ್ನು ತಬ್ಬಿಕೊಳ್ಳೋಣ ಅನಿಸುತ್ತದೆ. ಆಗಲೇ ಬರೋದು ಆ ಅತೀವ ನೋವು. ಎದೆ ಹಿಂಡುವ ಸಂಕಟ. ಹೀಗೆ ಶೂನ್ಯದಿಂದ ಮೌನದೆಡೆಗೆ ಅಲೆಯುತ್ತಲೇ ಇರುತ್ತಿದ್ದೇನೆ.
ನಿನ್ನ ನೆನಪನ್ನೇ ಇಷ್ಟೊಂದು ಪ್ರೀತಿಸುತ್ತಿರುವಾಗ, ಇನ್ನು ನಿನ್ನನ್ನು ಹೇಗೆ ಪ್ರೀತಿಸದಿರಲಿ? ಮೌನದಲ್ಲಿ ಕೇಳಿಸುವುದು ನಿನ್ನದೇ ಮಾತು, ನಿನ್ನದೇ ಪ್ರತಿಧ್ವನಿ. ಆಟವಾಡುವ ಮನಸ್ಸಿಗೆ ಪ್ರೀತಿಯ ಗಂಭೀರತೆಯನ್ನು ನೀಡಿದವನು ನೀನು. ಮೌನದಲ್ಲೇ ನಿನ್ನೊಂದಿಗೆ ಹರಟುವ ಕಲೆಯನ್ನು ನಾನು ಕಲಿತಾಗಿದೆ. ಈ ಪ್ರೀತಿ ತೀವ್ರತೆಯನ್ನು ಹೇಗೆ ತಿಳಿಸಲಿ ನಿನಗೆ? ವ್ಯಕ್ತವಾಗದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವೆಯ?
ಕಣ್ಮುಚ್ಚು, ನಾ ಬರುವೆ ಎನ್ನುತ್ತಿಯ?? ಹಾಗಿದ್ದರೆ ಮುಚ್ಚಿದ ಕಂಗಳಲಿ ಜೀವನ ಕಳೆಯಲೂ ನಾ ತಯಾರು. ಹೀಗೆ ಇಲ್ಲಿ, ಅಲ್ಲಿ, ಎಲ್ಲೆಲ್ಲೂ ನೀನಿರುವಾಗ ನಿನ್ನ ಹುಡುಕಬೇಕೆ ನಾನು? ಕಣ್ಮುಚ್ಚಿದಾಗ ಕಂಡಿದ್ದು ನೀನು ಮತ್ತು ನೀ ಹಿಡಿದ ಕೆಂಪು ಗುಲಾಬಿ. ನನಗಾಗಿ ತಂದಿರುವೆಯಲ್ಲ? ಬೇಗನೆ ನೀಡು. ಮನಸನ್ನು ನೀ ಕೊಟ್ಟ ಹೂದಳಗಳಲ್ಲಿ ಶ್ರಂಗರಿಸಬೇಕೆಂದಿರುವೆ. ನಿನ್ನೆಲ್ಲ ಸವಿನೆನಪು ಹೀಗೆ ಹಸಿರಾಗಿರಲಿ. ಪ್ರೀತಿ ಬಳ್ಳಿಗೆ ಕೋಟಿ ಚಿಗುರು ಮೂಡಲಿ. ಎರಡು ತೀರ ಯಾನ ಬಹುಬೇಗ ಕೊನೆಯಾಗಲಿ..
ನಿನ್ನ ನಿರೀಕ್ಷೆಯಲಿ..
ನಾನು.