Monday, February 1, 2010

ಪ್ರೀತಿ ಪರಿ..


ಪ್ರೀತಿ ಅದೆಷ್ಟು ಮುಗ್ಧ. ತನ್ನವನ ಬಗ್ಗೆ ಸಾವಿರ ಕನಸುಗಳನ್ನು ಕಟ್ಟಿ, ಅವೆಲ್ಲವನು ಕಣ್ಣೊಳಗೆ ಬಚ್ಚಿಟ್ಟು, ಅವನಿಗೋಸ್ಕರ ಕಾಯುವ ಪರಿ. ಬಚ್ಚಿಟ್ಟ ಪ್ರತಿಯೊಂದು ಕನಸನ್ನು ಅವನೆದುರು ಬಿಚ್ಚಿಟ್ಟು ಹಂಚಿಕೊಳ್ಳುವ ಪರಿ. ಅವನ ಬಾಹುಗಳಲ್ಲಿ ಬಂಧಿಯಾಗಿ, ಬಾನಿನಲ್ಲಿ ಯಾವುದೋ ಕಾಣದ ತಾರೆಯನ್ನು ದಿಟ್ಟಿಸುತ್ತಾ ತಾನೆಷ್ಟು ಸುಖಿ ಅಂದುಕೊಳ್ಳುವ ಪರಿ. ಅವನ ಹಿಂದೆ ಮುಂದೆ ಯಾವಾಗಲೂ ಓಡಾಡುತ್ತ ಇರಬೇಕು ಅಂದುಕೊಳ್ಳುವ ಪರಿ. ಅವನ ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತು ಹೇಗೆ ಕಾಣಿಸ್ತಿದಿನಿ ಎಂದು ನೋಡಿಕೊಳ್ಳುವ ಪರಿ. ಅವನ ಬಟ್ಟೆ ಘಮವನ್ನು ಆಸ್ವಾದಿಸುವ ಪರಿ. ಅವನ್ನು ನೋಡಲೇಬೇಕೆಂದು ಹಠ ಹಿಡಿಯುವ ಪರಿ. ನೋಡಿದೊಡನೆ ಎದೆ ಹೊಡೆದುಕೊಳ್ಳುವ ಪರಿ. ಕ್ಷಣವೇ ಅಪ್ಪಿಕೊಳ್ಳೋಣ ಎಂದು ಅನಿಸುವ ಪರಿ. ಹುಚ್ಚುತನ ಅನಿಸಿದರೂ ಅವನಿಗೋಸ್ಕರ ಏನಾದರು ಮಾಡುವ ಪರಿ.



ಪ್ರೀತಿ ಯಾವತ್ತೂ ನಿಂತ ನೀರಲ್ಲ. ಸದಾ ಹರಿಯುವ ನದಿ. ಪ್ರೀತಿಗೆ ಗೆರೆ ಎಳೆದು, ಇಷ್ಟೇ ಪ್ರೀತಿ ಮಾಡಲು ಸಾಧ್ಯ, ಇದರಾಚೆಯ ಪ್ರಪಂಚ ಪ್ರೀತಿಗೆ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಕಾಲಕ್ರಮೇಣ ಪ್ರೀತಿ ಪ್ರಬುದ್ಧತೆ ಪಡೆಯಬಹುದೇ ಹೊರತು, ನಿಂತ ನೀರಂತೆ ಆಚಲಿತವಾಗಲ್ಲ. ಪ್ರತಿ ಹೆಣ್ಣು ತನ್ನ ಹುಡುಗನಲ್ಲಿ ಹುಚ್ಚು ಪ್ರೀತಿ ನೋಡಬಯಸುತ್ತಾಳೆ. ತನ್ನನ್ನು ಮಿತಿ ಮೀರಿ ಪ್ರೀತಿಸಬೇಕು ಎಂದು ಬಯಸುತ್ತಾಳೆ. ಪ್ರತೀ ನೋಟದಲ್ಲೂ ಪ್ರೀತಿ ಹುಡುಕುತ್ತಾಳೆ. ಪ್ರತೀ ಮಾತಲ್ಲೂ ಪ್ರೀತಿ ನಿರೀಕ್ಷಿಸುತ್ತಾಳೆ. ತನ್ನೊಡನೆ ಕಷ್ಟವನ್ನು, ಸುಖವನ್ನು ಹಂಚಿಕೊಳ್ಳಬೇಕೆಂದು ಇಷ್ಟ ಪಡುತ್ತಾಳೆ.



ಯಾಕಿಷ್ಟು ಪೀಠಿಕೆ? ಹೇಳಬೇಕಾಗಿದ್ದು ಒಂದೇ ಒಂದು. ಕೊನೆಯುಸಿರು ಇರುವವರೆಗೂ ಅವನಿಂದ ಹುಚ್ಚು ಪ್ರೀತಿ ಬಯಸುತ್ತಿದೆ ಈ ಹುಚ್ಚು ಮನಸು. ಅವನ ಒಮ್ಮೆ ನೋಡಲು ಹಂಬಲಿಸುತ್ತಿದೆ ಈ ಹುಚ್ಚು ಮನಸು.


ಅವನಿಲ್ಲೇ ನನ್ನೊಳಗೆ ಇರುವನು. ಕದಡಿದ ಮನಕ್ಕೆ ಸಾಂತ್ವನ ನೀಡುವನು.

1 comment:

  1. Achu.... this is my fauforate among all your blogs I read till now(Jan-Feb)..:)
    Preethi estu kottru mugiyalla matte sikkastu manasu adakkagi innu hambalisutte annodakke kannadi hidida hagide e kavana.Thumba chennagide..:)

    ReplyDelete