Sunday, December 25, 2011

ಉತ್ತರ..

ಮನಸಿನ ಬಿಳಿ ಹಾಳೆಯಲ್ಲಿ ನಿನ್ನದೇ ಚಿತ್ರ, ಕಣ್ಣು ತುಂಬಾ ನಿನ್ನದೇ ರೂಪ, ಆಡುವ ಪ್ರತಿ ಮಾತಿನಲ್ಲೂ ನಿನ್ನದೇ ಹೆಸರು, ಹಾಡುವ ಪ್ರತಿ ಹಾಡಿನಲ್ಲೂ ನಿನ್ನದೇ ಭಾವ, ಕಣ್ಣು ಮುಚ್ಚಿದರೆ ಕಾಡೋದು ನಿನ್ನದೇ ಕನಸು. ಕನಸಲ್ಲಿ ಬರೋ ಸೂರ್ಯನ ಹೊಂಬಣ್ಣ, ಜಡಿ ಮಳೆ, ಕಾಮನ ಬಿಲ್ಲು, ಕಾಲಿಗೆ ತಣ್ಣಗೆ ಸೋಕುವ ಬೆಳಗಿನ ಪುಟ್ಟ ಇಬ್ಬನಿ, ಪ್ರತಿ ಹೂವು, ಬಳ್ಳಿ, ಪ್ರತಿ ಬೀದಿ, ಗಲ್ಲಿ, ಅಡ್ಡ, ತಿರುವು, ಕೆರೆ, ನದಿ, ಕಾಲುವೆಯೂ ನೀನಿಲ್ಲದೆ ಖಾಲಿ ಖಾಲಿ. ಇಷ್ಟೊಂದು ಒಲವನ್ನು ಒಡಲಲ್ಲಿ ತುಂಬಿಕೊಂಡು ಹೇಳದೆ ಹೇಗಿರಲಿ? ಪ್ರತಿ ಕ್ಷಣವೂ ನಿನ್ನ ಇಲ್ಲದಿರುವಿಕೆಯಲ್ಲಿ ಬೇಸತ್ತಿದೆ. ದಿನ ಸೋಲುತ್ತಿದೆ ಚಲಿಸುವ ಉತ್ಸಾಹವಿಲ್ಲದೆ. ಇಳಿಸಂಜೆಯಲ್ಲಿ ಒಬ್ಬಂಟಿಯಾಗಿದ್ದೇನೆ. ನೀ ಇಲ್ಲದ ಮೌನವನ್ನು ಹೇಗೆ ಸವಿಯಲಿ? ಬರೆದಿರುವ ಪ್ರತಿ ಅಕ್ಷರವೂ ಪ್ರೆಶ್ನೆಯಾಗಿ ಕಾಡುತ್ತಿದೆ. ನಿನ್ನ ಸನಿಹವೇ ಅವಕ್ಕೆ ಉತ್ತರ.


Friday, September 2, 2011

ಎಲ್ಲೆಂದರಲ್ಲಿ ವಿಶಾಲವಾಗಿ ಹರಡಿತ್ತು ಹಸಿರು. ತಲೆಯೆತ್ತಿ ನೋಡಿದರೆ ಬಾನೆಲ್ಲ ನೀಲಿ ನೀಲಿ. ತಿಳಿನೀರಿನಂತೆ ನಿರ್ಮಲ. ಅಲ್ಲಲ್ಲಿ ಬಾನಕ್ಕಿಗಳ ನಲಿವು. ಹಕ್ಕಿಗಳ ಪಿಸುಮಾತು. ತಂಪಾದ ಗಾಳಿ ಮೈದಡವಿ ಹಾಗೆ ಮುಂದಕ್ಕೆ ಸಾಗುತಿತ್ತು. ಅದಕ್ಕೆ ತಕ್ಕಂತೆ ಮರದ ಎಲೆಗಳು ನರ್ತಿಸಿದಂತೆ ಕಾಣುತಿತ್ತು. ಇಂತಹ ವಾತಾವರಣದಲ್ಲಿ ನೀನಿರದಿದ್ದರೆ ಮನಸು ಕೇಳುವುದೇ? ಅಲ್ಲಿ ನೀನು ಖಂಡಿತ ಇದ್ದೆ. ನನ್ನ ಅಂಗೈಯನ್ನು ನಿನ್ನ ಅಂಗೈಯಲ್ಲಿ ಹುದುಗಿಸಿಕೊಂಡಿದ್ದೆ. ನಿನ್ನ ಕೈ, ನನ್ನ ಪೂರ್ತಿ ಬದುಕಿಗೆ ಆಶ್ರಯ ಕೊಡುವಂತಿತ್ತು. 

ಇವತ್ತಿನ ದಿನ ಎಲ್ಲ ದಿನಗಳಂತಲ್ಲ. ನಮ್ಮಿಬ್ಬರ ಜೀವನದ ಅತ್ಯಂತ ಖುಷಿಯ ಸಂದರ್ಭಕ್ಕೆ ಮೈಲಿಗಲ್ಲು ಇಡುವ ಈ ದಿನ ತುಂಬಾ ಅತ್ಯಮೂಲ್ಯವಾದುದು. ಹಿಂದೆ ತಿರುಗಿ ನೋಡಿದರೆ ನಾವಿಬ್ಬರು ನಡೆದು ಬಂದ ದಾರಿ. ಅಲ್ಲಿ ಅರಳಿದ್ದ ಹೂವುಗಳು ನಮ್ಮನ್ನು ನೋಡಿ ನಗೆ ಬೀರುತ್ತಿತ್ತು. ಅಲ್ಲೆಲ್ಲ ಬರಿ ನಗುವೇ ತುಂಬಿತ್ತು. ನಮ್ಮ ಬಗ್ಗೆ ನನಗೇ ಹೆಮ್ಮೆಯೆನಿಸಿತು. ಹೀಗೆ ಯಾವಾಗಲು ನಗುತ್ತಾ ಮುಂದುವರೆಯಲು ಉತ್ಸಾಹ ತುಂಬಿತ್ತು. 

ನಮ್ಮ ಮುಂದೆ ಬಣ್ಣ ಬಣ್ಣದ ಅಸಂಖ್ಯಾತ ಕನಸುಗಳು. ಕನಸುಗಳು ಅಸಂಖ್ಯಾತವಾದರೂ ನಾವಿಬ್ಬರು ಕಾಣುವುದು ಒಂದೇ ರೀತಿಯ ಕನಸುಗಳು. ಗುರಿ ಒಂದೇ, ಪರಿ ಒಂದೇ. ಅವೆಲ್ಲವೂ ನಮಗಾಗಿ, ನಮ್ಮಖುಷಿಗಾಗಿ. 

ಇಬ್ಬರೂ ಸೇರಿ ಇನ್ನೂ ಹೊಸ ಹೊಸ ಕನಸುಗಳಿಗೆ ಬಣ್ಣ ಹಚ್ಚೋಣ. ಬದುಕನ್ನು ರಂಗಾಗಿಸೋಣ. ನಮ್ಮ ಖುಷಿಯ ಹೊಸ ಹೊಸ ಮುಗ್ಧ ಕನಸುಗಳನ್ನೂ ಪೂರೈಸೋಣ. ಹೊಸ ಜೀವನದತ್ತ, ಹೊಸ ಕನಸಿನೆಡೆಗೆ ಜೊತೆಯಾಗಿ  ಮುನ್ನಡೆಯೋಣ. 

Wednesday, August 3, 2011

ನಿನ್ನೆದೆ ಬಡಿತ ಕೇಳೋಣವೆಂದು ನಿನ್ನ ಎದೆಗೆ ಒರಗಿದರೆ ಅಲ್ಲಿಯೇ ನಿದ್ದೆ ಹೊಗಿಬಿಟಿದ್ದೆ. ನಿನ್ನ ಆಶ್ರಯ ಅದೆಷ್ಟು ನೆಮ್ಮದಿ ಕೊಡುತ್ತೆ. ಯಾವುದೇ ನೋವಲ್ಲಿ ಮನಸು ಒದ್ದಾಡಿದರೂ, ಅದೆಷ್ಟು ಸಂಕಟವಾದರೂ, ನೋವಿಗೆ ಯಾರೇ ಕೂಡ ಕಾರಣವಾದರೂ ನಿನ್ನಲ್ಲಿ ಹೇಳ್ಕೊಳ್ಳಲಿಲ್ಲ ಅಂದ್ರೆ ಸಮಾಧಾನ ಸಾಧ್ಯವೇ ಇಲ್ಲ. ನಿನ್ನ ಮಾತುಗಳು ನೋವನ್ನೆಲ್ಲ ಅಳಿಸಿ ನೆಮ್ಮದಿ ತುಂಬುತ್ತೆ. ನೀನು ಮೊದಲೇ ಯಾಕೆ ಸಿಗಲಿಲ್ಲ, ನೀನು ಸಿಕ್ಕಿದ ಮೇಲೆ ಯಾಕೆ ನನ್ನಿಂದ ಇಷ್ಟು ದಿನ ದೂರವಾಗಿದ್ದೆ ಅಂತ ಮನಸು ಹುಸಿ ಮುನಿಸು ತೋರಿಸ್ತಿದೆ. ನೀನು ಬಂದ ಮೇಲೆಯೇ ನನ್ನ ಜೀವನಕ್ಕೆ ಜೀವ ಬಂದದ್ದು. ನನ್ನ ಪ್ರತೀ ನೋವಿಗೂ, ಪ್ರತೀ ಕಷ್ಟಕ್ಕೂ, ಹೆಗಲು ಕೊಡುತ್ತಿಯಲ್ಲ? ನನ್ನ ಪ್ರತೀ ಭಾವನೆಗಳನ್ನ ಅರ್ಥ ಮಾಡ್ಕೋತಿಯಲ್ಲ? ನನ್ನನ್ನು ಹೀಗೆ ಇಷ್ಟೊಂದು ಇಷ್ಟ ಪಡುವ ನಿನಗೆ ನಾನು ಚಿರಋಣಿ. ನಿನ್ನ ಹೆಗಲಿಗೆ ಒರಗಿದ ಮೇಲೆ ನನಗೆ ಇನ್ನೇನು ಚಿಂತೆ. ಇನ್ನೆಲ್ಲ ಖುಷಿಯ ವಿಷಯಗಳೇ ತಾನೆ? ಆ ದೇವರಲ್ಲಿ ನನ್ನದೊಂದೇ ಪ್ರಾರ್ಥನೆ. ನಮ್ಮ ಈ ಪ್ರೀತಿಯ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ದೇವರೇ ಅಂತ.