Friday, September 2, 2011

ಎಲ್ಲೆಂದರಲ್ಲಿ ವಿಶಾಲವಾಗಿ ಹರಡಿತ್ತು ಹಸಿರು. ತಲೆಯೆತ್ತಿ ನೋಡಿದರೆ ಬಾನೆಲ್ಲ ನೀಲಿ ನೀಲಿ. ತಿಳಿನೀರಿನಂತೆ ನಿರ್ಮಲ. ಅಲ್ಲಲ್ಲಿ ಬಾನಕ್ಕಿಗಳ ನಲಿವು. ಹಕ್ಕಿಗಳ ಪಿಸುಮಾತು. ತಂಪಾದ ಗಾಳಿ ಮೈದಡವಿ ಹಾಗೆ ಮುಂದಕ್ಕೆ ಸಾಗುತಿತ್ತು. ಅದಕ್ಕೆ ತಕ್ಕಂತೆ ಮರದ ಎಲೆಗಳು ನರ್ತಿಸಿದಂತೆ ಕಾಣುತಿತ್ತು. ಇಂತಹ ವಾತಾವರಣದಲ್ಲಿ ನೀನಿರದಿದ್ದರೆ ಮನಸು ಕೇಳುವುದೇ? ಅಲ್ಲಿ ನೀನು ಖಂಡಿತ ಇದ್ದೆ. ನನ್ನ ಅಂಗೈಯನ್ನು ನಿನ್ನ ಅಂಗೈಯಲ್ಲಿ ಹುದುಗಿಸಿಕೊಂಡಿದ್ದೆ. ನಿನ್ನ ಕೈ, ನನ್ನ ಪೂರ್ತಿ ಬದುಕಿಗೆ ಆಶ್ರಯ ಕೊಡುವಂತಿತ್ತು. 

ಇವತ್ತಿನ ದಿನ ಎಲ್ಲ ದಿನಗಳಂತಲ್ಲ. ನಮ್ಮಿಬ್ಬರ ಜೀವನದ ಅತ್ಯಂತ ಖುಷಿಯ ಸಂದರ್ಭಕ್ಕೆ ಮೈಲಿಗಲ್ಲು ಇಡುವ ಈ ದಿನ ತುಂಬಾ ಅತ್ಯಮೂಲ್ಯವಾದುದು. ಹಿಂದೆ ತಿರುಗಿ ನೋಡಿದರೆ ನಾವಿಬ್ಬರು ನಡೆದು ಬಂದ ದಾರಿ. ಅಲ್ಲಿ ಅರಳಿದ್ದ ಹೂವುಗಳು ನಮ್ಮನ್ನು ನೋಡಿ ನಗೆ ಬೀರುತ್ತಿತ್ತು. ಅಲ್ಲೆಲ್ಲ ಬರಿ ನಗುವೇ ತುಂಬಿತ್ತು. ನಮ್ಮ ಬಗ್ಗೆ ನನಗೇ ಹೆಮ್ಮೆಯೆನಿಸಿತು. ಹೀಗೆ ಯಾವಾಗಲು ನಗುತ್ತಾ ಮುಂದುವರೆಯಲು ಉತ್ಸಾಹ ತುಂಬಿತ್ತು. 

ನಮ್ಮ ಮುಂದೆ ಬಣ್ಣ ಬಣ್ಣದ ಅಸಂಖ್ಯಾತ ಕನಸುಗಳು. ಕನಸುಗಳು ಅಸಂಖ್ಯಾತವಾದರೂ ನಾವಿಬ್ಬರು ಕಾಣುವುದು ಒಂದೇ ರೀತಿಯ ಕನಸುಗಳು. ಗುರಿ ಒಂದೇ, ಪರಿ ಒಂದೇ. ಅವೆಲ್ಲವೂ ನಮಗಾಗಿ, ನಮ್ಮಖುಷಿಗಾಗಿ. 

ಇಬ್ಬರೂ ಸೇರಿ ಇನ್ನೂ ಹೊಸ ಹೊಸ ಕನಸುಗಳಿಗೆ ಬಣ್ಣ ಹಚ್ಚೋಣ. ಬದುಕನ್ನು ರಂಗಾಗಿಸೋಣ. ನಮ್ಮ ಖುಷಿಯ ಹೊಸ ಹೊಸ ಮುಗ್ಧ ಕನಸುಗಳನ್ನೂ ಪೂರೈಸೋಣ. ಹೊಸ ಜೀವನದತ್ತ, ಹೊಸ ಕನಸಿನೆಡೆಗೆ ಜೊತೆಯಾಗಿ  ಮುನ್ನಡೆಯೋಣ. 

No comments:

Post a Comment