Sunday, April 25, 2010

ನಿನ್ನೊಂದಿಗೆ ಮೊದಲ ಮಳೆ..


ಅವ್ಯಕ್ತ ಸಂತೋಷ, ಸಂತೃಪ್ತ ಮನಸು ಇವುಗಳ ನಿಜವಾದ ಅರ್ಥ ಇವಾಗ್ಲೇ ಅರ್ಥ ಆಗ್ತಿರೋದು. ನಿನ್ನ ಹತ್ರ ಹೇಳ್ಲಿಕ್ಕೆ ಆಗ್ತಿಲ್ಲ ಅದೆಷ್ಟು ಖುಷಿ ಇದೆ ಮನಸಲ್ಲಿ ಅಂತ. ಇನ್ನು ಮುಂದೆ ಯಾವಾಗಲೂ ನನ್ನ ಬಳಿ ಇರ್ತಿಯ ಅನ್ನೋ ಭಾವನೆ ಅದೆಷ್ಟು ಚಂದ. ಮೊನ್ನೆ ಕನಸಲ್ಲಿ ಬಂದ ಹೂವಿನ ಕಾಮನ ಬಿಲ್ಲಿನಂತೆ. ಬಾ ನನ್ನ ಕನಸಲ್ಲಿ, ನಿನಗೂ ತೋರಿಸ್ತೀನಿ ಅದು ಹೇಗಿದೆ ಅಂತ.

ಮಳೆ ಬಂದಾಗ curtains ಯಾಕೆ ತೆಗಿತೀನಿ ಗೊತ್ತಾ, ನಿಂಜೊತೆ ಮಳೆ ನೋಡ್ತಾ, ನಿನ್ನ ಕೈ ಹಿಡಿದು, ಏನನ್ನು ಕೂಡ ಮಾತಾಡದೆ ಕೂತ್ಕೊಬೇಕು ಅನ್ನೋದು ಅದೆಷ್ಟು ದಿನದ ಆಸೆ. ಈ ಮಳೆ ನನ್ನಲ್ಲಿ ಅದೆಲ್ಲೋ ಬಚ್ಚಿಟ್ಟ, ಬಣ್ಣ ಬಣ್ಣದ ಭಾವನೆಗಳನ್ನು ಬಡಿದೆಬ್ಬಿಸಿ, ತನ್ನ ತುಂತುರು ಹನಿಗಳನ್ನು ಮನಸಿಗೆ ಚಿಮುಕಿಸಿ, ಯಾಕೋ ನನ್ನನ್ನು ನಿನ್ನ ಹತ್ತಿರಕ್ಕೆ ಅಲ್ಲ, ನಿನ್ನೋಳಗೆನೆ ತಂದು ಬಿಡುತ್ತದೆ. ಇಷ್ಟೆಲ್ಲಾ ಮಾಡುವ ಅದನ್ನು ಪ್ರೀತಿಸದೇ ಇನ್ನೇನು ಮಾಡಲಿ. ನಿನಗೆ ಸಂಬಂಧಪಟ್ಟ ಪ್ರತಿಯೊಂದು ಕ್ಷಣವೂ ಕೂಡ ನನಗೆ ಆಪ್ತ, ಆತ್ಮೀಯ. ನನ್ನ ಹಳೆಯ ಮೊಬೈಲ್ ಹಾಳಾದಾಗ ಅದ್ಯಾಕೆ ಸಂಕಟ ಆಯಿತು ಗೊತ್ತಾ, ನಮ್ಮ ಮೊದಲ ಮತ್ತು ಆಮೇಲಿನ ಭೇಟಿಯ ಪ್ರತಿ ನೆನಪು ಅದರಲ್ಲಿತ್ತು. ಆದರೂ ಆ ಭೇಟಿಯ, ಮಾತಿನ ಪ್ರತಿಯೊಂದು ಎಳೆಯೂ ಕೂಡ ಮನಸಲ್ಲಿ ಇನ್ನೂ ಕೂಡ ಈಗಷ್ಟೇ ಅರಳಿದ ಹೂವಂತಿದೆ. ಈ ಹೂವಿಗೆ ಬಾಡುವುದೇ ಗೊತ್ತಿಲ್ಲ. ಅದು ಯಾವಾಗಲೂ ನನ್ನೊಳಗೆ ಹೀಗೆ ನಿನ್ನ ಘಮ ಇಡುವುದು. ಕೊನೆಯುಸಿರಿನ ತನಕವೂ. ಅದರ ನಂತರವೂ.

ಬಾ ಇವತ್ತು ಸಂಜೆ ಮಳೆಯಲಿ ನೆನೆಯೋಣವೇ..? ಒದ್ದೆ ನೆಲದ ಮೇಲೆ ಒದ್ದೆ ಕಾಲುಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕೋಣವೆ..? ಮನಸನ್ನು ಪೂರ್ತಿ ಒದ್ದೆಯಾಗಿಸಿ, ಒಬ್ಬರೊಬ್ಬರ ಮೇಲೆ ಭಾವನೆಗಳ ಬಣ್ಣಗಳನ್ನು ಎರಚೋಣವೇ..?

ನಿನ್ನವಳು..

No comments:

Post a Comment