Wednesday, May 12, 2010

ನಿನ್ನ ಸವಿನೆನಪೇ..

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ..

ನಿನಗೋಸ್ಕರ ಬರೆದಿರೋ ನನ್ನ ಡೈರಿಯಲ್ಲಿ ಮೊದಲ ಪುಟದ ಮೊದಲ ಪದಗಳಿವು. ಈ ಹಾಡು ಮೊದಲಿನಿಂದನೂ ಇಷ್ಟ ಆಗ್ತಾ ಇತ್ತು. ಅಮ್ಮ ಹೇಳಿ ಕೊಟ್ಟಿರೋ ಹಾಡು ಇದು. ನೀನು ಬಂದ ಮೇಲೆ ಇನ್ನು ಜಾಸ್ತಿ ಇಷ್ಟ ಆಗ್ತಿದೆ. ನಿನಗೋಸ್ಕರ ಯಾವಾಗಲೂ ಹಾಡಬೇಕು ಅನ್ಸುತ್ತೆ. ಬೆಳಿಗ್ಗೆ ಗಡಿಬಿಡಿಯಲ್ಲಿ ನಿಂಗೆ ಸರಿಯಾಗಿ bye ಹೇಳೋಕ್ಕೂ ಆಗ್ಲಿಲ್ಲ. ಆಫೀಸಿಗೆ ಬಂದು ಅದೇ ಯೋಚನೆಯಲ್ಲಿ ಬೇಜಾರಾಗ್ತಾ ಇರುತ್ತೆ. ಏನಾದ್ರು ಬರೆಯೋಣ ಅಂದ್ರೆ ನಿನ್ನ ವಿಷಯ ಬಿಟ್ರೆ ಬೇರೆ ಏನು ಸಿಗಲ್ಲ. ನಿಂಗೊತ್ತಾ ನಿನ್ನ ಬಗ್ಗೆ ಬರೆಯೋದೇ ನಂಗಿಷ್ಟ. ನೆನಪಿದೆಯ ನಿಂಗೆ? ಅವತ್ತು ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಇಬ್ರು ಕೂತ್ಕೊಂಡು ಮಾತಾಡ್ತಾ ಇದ್ದಿದ್ದು? ಮಾತಾಡೋಕ್ಕೆ ಆಗ್ತಿರ್ಲಿಲ್ಲ ನನ್ನಿಂದ. ಗಂಟಲು ಕಟ್ಟಿ ಬಂದು ಹೇಳಬೇಕಗಿರೋದನ್ನೆಲ್ಲ ನುಂಗಿದ್ದೆ. ಅವತ್ತೇ ಕೊನೆ ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಕೂತ್ಕೊಂಡಿದ್ದು. ನಂತರ ಒಂದು ದಿನ ನೀನು ಪಕ್ಕದಲ್ಲೇ ಪಿಸುಗುಟ್ಟಿದ್ದೆ, ಇನ್ಮುದೆ ಚೆನ್ನೈಗೆ ಹೋಗೋ ಹಾಗಿಲ್ಲ ಅಂತ. ಅವತ್ತೇ ನಾನು ತೀರ್ಮಾನ ಮಾಡಿದ್ದು, ಇನ್ಮುಂದೆ ನಮ್ಮ ಮಧ್ಯ ದೂರ ಅನ್ನೋದೇ ಬರಬಾರದು ಅಂತ. ನಿನ್ನ ಸಾಮಿಪ್ಯವೇ ನನ್ನ ನೆಮ್ಮದಿ.

ಆಮೇಲೆ ನೀನು ಇಲ್ಲಿಗೆ ಬಂದ ನಂತರ ಡೈರಿ ಬರೆಯೋದೇ ನಿಂತೋಗಿದೆ!! ಒಂದ್ಸಲನಾದ್ರೂ ಕುತೂಹಲಕ್ಕೆ ನನ್ನ ಡೈರಿನ ನೋಡಿದಿಯ ಏನಾದ್ರು ಬರೆದಿದ್ದಿನ ಅಂತ? ಅದೇನೋ ಅಲ್ಪ ಸ್ವಲ್ಪ ಬರೆದಿರಬಹುದು. ಈಗ life ಅನ್ನೋದು busy ಆಗೋಗಿದೆ. ಬರೆಯೋದಿರಲಿ, ಓದೋದಕ್ಕೂ ಟೈಮ್ ಸಾಕಾಗ್ತಿಲ್ಲ. ಆದ್ರೆ ನೀನು ನನ್ನ ಹತ್ತಿರ ಇದ್ದೀಯ ಅನ್ನೋ ಭಾವನೆನೇ ಖುಷಿ ಕೊಡುತ್ತೆ. ಏನೇ ಕೆಲಸ ಮಾಡ್ತಾ ಇದ್ರುನು ನೀನು ಪಕ್ಕ ಇರ್ಬೇಕು ಅನ್ಸುತ್ತೆ. ಆದ್ರೆ ಆಫೀಸ್ನಲ್ಲಿ ವಿಧಿಯಿಲ್ಲ. ಅದ್ಕೆ ನೀನು ತುಂಬ ನೆನಪಾಗ್ತಾ ಇರ್ತಿಯ. ಅವಾಗ್ಲೇ ಈ ಹಾಡು ಕೂಡ ನೆನಪಾಗೋದು. 

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ.. 

ತುಂಬ ನೆನಪಾಗ್ತಾ ಇದ್ದೀಯ..  

Tuesday, May 11, 2010

ಜೀವನ..

ಸಂಭಂದದ ಎಳೆಗಳು ಎಲ್ಲಿ ಜೋಡಣೆಯಾಗುವುದೋ, ಎಲ್ಲಿ ಎಳೆ ಸಡಿಲವಾಗಿ ಬಿಚ್ಚಿಕೊಳ್ಳುವುದೋ ಯಾರೂ ಮುಂದಾಗಿ ತಿಳಿಯಲಾರರು. ಬೇಡವಾಗಿರುವ ಸಂಭಂದಗಳನ್ನು ಸುಲಭದಲ್ಲಿ ಕಿತ್ತೆಸೆಯಬಹುದು. ಆದರೆ ಬೇಕೇ ಬೇಕಾಗಿರುವ ಸಂಭಂದಗಳನ್ನು ಅಷ್ಟು ಸುಲಭದಲ್ಲಿ ಮುರಿಯಲಾಗುವುದಿಲ್ಲ. ಮನಸು ಕೇಳದು. ಆದರೆ ಜೀವನದ ಕೆಲವು ಕ್ಲಿಷ್ಟ ಸಂದರ್ಭಗಳು ಇವೆಲ್ಲವನ್ನೂ ನಮ್ಮಿಂದ ಮಾಡಿಸುತ್ತದೆ. ಮುಂದೆ ಜೀವನ ನಡೆಯಬೇಕಾದರೆ ಕೆಲವು ತ್ಯಾಗ, ಕೆಲವು ಹೊಂದಾಣಿಕೆ ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ. ಜೀವನದಲ್ಲಿ ಊಹಿಸಲಾಗದ ತಿರುವುಗಳು ಬದುಕಿನ ದಾರಿಯನ್ನೇ ಬದಲಿಸಿ, ಮುಂದೇನಾಗುವುದು ಎಂಬ ಅತಿ ದೊಡ್ಡ ಪ್ರಶ್ನಾರ್ತಕ ಚಿನ್ಹೆಯನ್ನು ನಮ್ಮೆದುರು ತಂದಿಡುವುದು. ಆಗಲೇ ಎಲ್ಲವು uncertain ಅನ್ನಿಸೋಕೆ ಶುರುವಾಗುವುದು.

ಇದೆ ಜೀವನ. ಹೊಸ ಸಂಬಂಧದಲ್ಲಿ ಅರ್ಥ ಹುಡುಕಿ ಬದುಕೋದೇ ಮುಂದಿನ ಹೊಸ ದಾರಿಯಲ್ಲಿ ಅಳವಡಿಸಿಕೊಳ್ಳಬೇಕಾದುದು. ಪ್ರತಿಯೊಂದು ದಾರಿಗೂ ಅದರದ್ದೇ ಆದ ವಿಶಿಷ್ಟವಾದ ಗುರಿ. ಹೊಸ ಹಾದಿಯಲ್ಲೂ ಕೂಡ ಹೂವುಗಳಿರುವುದು. ಹಕ್ಕಿಗಳ ಚಿಲಿಪಿಲಿಗಳಿರುವುದು. ಹೊಸ ಅನುಭವಗಳಿರುವುದು. ಹೊಸ ನಗು ಇರುವುದು. ಹೊಸ ಆಸೆ, ಹೊಸ ಬಯಕೆ, ಸಂತೋಷ, ಸಡಗರ, ಹೊಸ ಗೆಳೆತನ ಇರುವುದು. ಮನಸು ಬಿಚ್ಚಿ ಭಾವನೆ ಹಂಚಿಕೊಳ್ಳಲು ಪ್ರೀತಿ ಪಾತ್ರರದವರೂ ಸಿಗುವರು. ಯಾರಿಗ್ಗೊತ್ತು, ಎಲ್ಲಿಯೂ ಸಿಗದ ಅಮೂಲ್ಯ ಪ್ರೀತಿ ಇಲ್ಲಿಯೇ ಸಿಗುವುದು. ವಿಷಾದಗಳೆಲ್ಲವನ್ನೂ ಕಟ್ಟಿಟ್ಟು, ಹೊಸ ಜೀವನಕ್ಕೆ, ಹೊಸ ಪ್ರೀತಿಗೆ ಮೈ ಒಡ್ಡಿ, ಹೊಸ ಗುರಿಗಳೊಂದಿಗೆ ಮುಂದುವರೆಯುವುದೇ ಬದುಕು.

Wednesday, April 28, 2010

ಹೊರಗಡೆ ಹೋಗಿ ಬಂದ್ರೆ ಮುಗಿತು ನಿನ್ ಕೆಲಸ. ಆಮೇಲೆ ನೀನು ಎಲ್ಲಿದಿಯ, ಏನು ಮಾಡ್ತಿದೀಯ ಅಂತ ಯಾರಿಗೂ ಗೊತ್ತಾಗಲ್ಲ. ಹೇಳದೆ ಕೇಳದೆ ತಂದಿರೋ ಎಲ್ಲ newspapers , magazines ನಮ್ಮ ವಿಶಾಲವಾದ bed ನ ಮೇಲೆ ಹಾಕ್ಕೊಂಡು ಕುತ್ಕೊಂಡು ಬಿಡ್ತಿಯ. ನಂಗೆ ಹೊಟ್ಟೆ ಉರಿದು ತಂದಿರೋ ಎಲ್ಲವನ್ನು ತೆಗೆದು ನಿನ್ನ concentration divert ಮಾಡಿದ್ರೆನೇ ಸಮಾಧಾನ. ಆಮೇಲೆ ಅಯ್ಯೋ ಪಾಪ ಅಂತ ಅನ್ನಿಸಿ ಬಿಡುತ್ತೆ. ಆದ್ರೂನು ನೀನು ಒಬ್ನೇ ಕೂತ್ಕೊಂಡು ಓದ್ತಾ ಇರೋವಾಗ ಹಾಗೆ ನಿನ್ನ ನೋಡ್ತಾ ಕೂರೋದು ನಂಗಿಷ್ಟ. ಆಗ್ಲೇ ಭಾವನೆಗಳೆಲ್ಲ ರೆಕ್ಕೆ ಬಿಚ್ಚಿ ಬಾನಿಗೆ ಹಾರೋದು. ಅವೆಲ್ಲ ಮತ್ತೆ ಗೂಡಿಗೆ ಬರೋದು ಅರೆಮನಸ್ಸಿನಿಂದ.

ನಿನ್ನನ್ನ ಎಷ್ಟು ಮಿಸ್ ಮಾಡ್ಕೊಂಡೆ ಅಂತ ಈಗ ನೆನೆಸಿಕೊಂಡರೆ ಒಂದು ಪುಟ್ಟ ಮಂದಹಾಸ ಮೂಡುತ್ತೆ ಮುಖದಲ್ಲಿ. ನಿನ್ನ ಸನಿಹದ ನೆನಪಲ್ಲಿ ಮೈಮರೆಯುತ್ತಿತ್ತು ಮನಸು. ಈಗ ನಿನ್ನ ಸನಿಹದಲ್ಲೇ ಮೈಮರೆಯುತ್ತೆ. ನಿನ್ನ ನೆನಪುಗಳ ಒಂದು ಅಮೂಲ್ಯ ಭಂಡಾರವೇ ಇದೆ ಮನಸ್ಸಲಿ. ಅದು ಹನಿಯುವ ಜೇನಿನಂತೆ. ಆಗಾಗ ಅದನ್ನು ಸವಿಯುವುದು ನನಗೆ ತುಂಬ ಇಷ್ಟವಾದ ಕೆಲಸಗಳಲ್ಲಿ ಒಂದು. ಎಷ್ಟು ಸಲ ನೆನೆಸಿಕೊಂಡರೂ ಪ್ರತಿ ಸಲ ಒಂದು ಹೊಸ ಚೈತನ್ಯ ಕೊಡುತ್ತೆ. ನಿನ್ನ ನೋಡಲು ಒದ್ದಾಡುತ್ತಿದ್ದ ಮನಸ್ಸು ಈಗ ಒಂದು ಹಿತವಾದ ಭಾವನೆಯಲ್ಲಿ ಸಂಭ್ರಮಿಸುತ್ತಿದೆ. ನೆನಪುಗಳು ನೆನಪಾಗಿಯೇ ಉಳಿಯಲಿ. ಮತ್ತೆ ನಿನ್ನಿಂದ ದೂರ ಇದ್ದು ಬದುಕುವ ಶಕ್ತಿ ಇಲ್ಲ. ನಿನ್ನ ಸನಿಹ ಯಾವಾಗಲೂ ಹೀಗೆ ಇರಲಿ. ಹೊಸ ಹೊಸ ಬಣ್ಣಗಳ ಭಾವನೆಗಳು ದಿನವೂ ಚಿಮ್ಮುತ್ತಿರಲಿ. ಈ ಸಂತೋಷ, ಧನ್ಯತಾ ಭಾವ ನಿರಂತರವಾಗಿರಲಿ.

Sunday, April 25, 2010

ನಿನ್ನೊಂದಿಗೆ ಮೊದಲ ಮಳೆ..


ಅವ್ಯಕ್ತ ಸಂತೋಷ, ಸಂತೃಪ್ತ ಮನಸು ಇವುಗಳ ನಿಜವಾದ ಅರ್ಥ ಇವಾಗ್ಲೇ ಅರ್ಥ ಆಗ್ತಿರೋದು. ನಿನ್ನ ಹತ್ರ ಹೇಳ್ಲಿಕ್ಕೆ ಆಗ್ತಿಲ್ಲ ಅದೆಷ್ಟು ಖುಷಿ ಇದೆ ಮನಸಲ್ಲಿ ಅಂತ. ಇನ್ನು ಮುಂದೆ ಯಾವಾಗಲೂ ನನ್ನ ಬಳಿ ಇರ್ತಿಯ ಅನ್ನೋ ಭಾವನೆ ಅದೆಷ್ಟು ಚಂದ. ಮೊನ್ನೆ ಕನಸಲ್ಲಿ ಬಂದ ಹೂವಿನ ಕಾಮನ ಬಿಲ್ಲಿನಂತೆ. ಬಾ ನನ್ನ ಕನಸಲ್ಲಿ, ನಿನಗೂ ತೋರಿಸ್ತೀನಿ ಅದು ಹೇಗಿದೆ ಅಂತ.

ಮಳೆ ಬಂದಾಗ curtains ಯಾಕೆ ತೆಗಿತೀನಿ ಗೊತ್ತಾ, ನಿಂಜೊತೆ ಮಳೆ ನೋಡ್ತಾ, ನಿನ್ನ ಕೈ ಹಿಡಿದು, ಏನನ್ನು ಕೂಡ ಮಾತಾಡದೆ ಕೂತ್ಕೊಬೇಕು ಅನ್ನೋದು ಅದೆಷ್ಟು ದಿನದ ಆಸೆ. ಈ ಮಳೆ ನನ್ನಲ್ಲಿ ಅದೆಲ್ಲೋ ಬಚ್ಚಿಟ್ಟ, ಬಣ್ಣ ಬಣ್ಣದ ಭಾವನೆಗಳನ್ನು ಬಡಿದೆಬ್ಬಿಸಿ, ತನ್ನ ತುಂತುರು ಹನಿಗಳನ್ನು ಮನಸಿಗೆ ಚಿಮುಕಿಸಿ, ಯಾಕೋ ನನ್ನನ್ನು ನಿನ್ನ ಹತ್ತಿರಕ್ಕೆ ಅಲ್ಲ, ನಿನ್ನೋಳಗೆನೆ ತಂದು ಬಿಡುತ್ತದೆ. ಇಷ್ಟೆಲ್ಲಾ ಮಾಡುವ ಅದನ್ನು ಪ್ರೀತಿಸದೇ ಇನ್ನೇನು ಮಾಡಲಿ. ನಿನಗೆ ಸಂಬಂಧಪಟ್ಟ ಪ್ರತಿಯೊಂದು ಕ್ಷಣವೂ ಕೂಡ ನನಗೆ ಆಪ್ತ, ಆತ್ಮೀಯ. ನನ್ನ ಹಳೆಯ ಮೊಬೈಲ್ ಹಾಳಾದಾಗ ಅದ್ಯಾಕೆ ಸಂಕಟ ಆಯಿತು ಗೊತ್ತಾ, ನಮ್ಮ ಮೊದಲ ಮತ್ತು ಆಮೇಲಿನ ಭೇಟಿಯ ಪ್ರತಿ ನೆನಪು ಅದರಲ್ಲಿತ್ತು. ಆದರೂ ಆ ಭೇಟಿಯ, ಮಾತಿನ ಪ್ರತಿಯೊಂದು ಎಳೆಯೂ ಕೂಡ ಮನಸಲ್ಲಿ ಇನ್ನೂ ಕೂಡ ಈಗಷ್ಟೇ ಅರಳಿದ ಹೂವಂತಿದೆ. ಈ ಹೂವಿಗೆ ಬಾಡುವುದೇ ಗೊತ್ತಿಲ್ಲ. ಅದು ಯಾವಾಗಲೂ ನನ್ನೊಳಗೆ ಹೀಗೆ ನಿನ್ನ ಘಮ ಇಡುವುದು. ಕೊನೆಯುಸಿರಿನ ತನಕವೂ. ಅದರ ನಂತರವೂ.

ಬಾ ಇವತ್ತು ಸಂಜೆ ಮಳೆಯಲಿ ನೆನೆಯೋಣವೇ..? ಒದ್ದೆ ನೆಲದ ಮೇಲೆ ಒದ್ದೆ ಕಾಲುಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕೋಣವೆ..? ಮನಸನ್ನು ಪೂರ್ತಿ ಒದ್ದೆಯಾಗಿಸಿ, ಒಬ್ಬರೊಬ್ಬರ ಮೇಲೆ ಭಾವನೆಗಳ ಬಣ್ಣಗಳನ್ನು ಎರಚೋಣವೇ..?

ನಿನ್ನವಳು..

Wednesday, March 3, 2010

ನಿನ್ನ ನೋಡೋ ಆಸೆಯಲಿ..


ಭಾವನೆಗಳು ಅಳಿಸಿ ಹೋಗುವ ಮುನ್ನ ಹಾಳೆಗಳ ಮೇಲೆ ಇಳಿಸೋಣ ಅಂತ ಬರೀತಾ ಇದೀನಿ. ಬೆರಳುಗಳಿಗೆ ಬರೆಯಲು ಮರೆತು ಹೋಗುವಷ್ಟು ದಿನಗಳಾದವು ಬರೆದು. ಇವತ್ತು ನಿನಗೋಸ್ಕರ ಬರೀತಾ ಇದೀನಿ. ಎಷ್ಟು ವಿಚಿತ್ರ ಜೀವನ. ಅಂದುಕೊಳ್ಳೋದೇ ಒಂದು, ಆಗೋದು ಇನ್ನೊಂದು. ಆಗೋ ಸಾಧ್ಯತೆಗಳು ತುಂಬಾನೆ ಇದ್ರೂನು, ನಾನು ಹೀಗೆ ಅಂದುಕೊಂಡಿದ್ದೀನಿ ಅನ್ನೋ ಕಾರಣಕ್ಕೆ ನಡೆಯೋದು ಬೇರೇನೆ ಆಗಿರುತ್ತೆ. ಯಾಕೆ ಇಷ್ಟು ನೆಗಟಿವೆ ಥಿಂಕ್ ಮಾಡ್ತಿದೀಯ ಅಂತ ಕೇಳ್ತಿಯ? ನೀನೆ ಹೇಳು, ಹಾಗೆ ಆಗ್ತಿದೆ ಅಲ್ವ? ಅದೆಷ್ಟು ದಿನದಿಂದ ಕಾಯ್ತಿದೀನಿ ಬೇಗ ಸರಿಹೋಗುತ್ತೆ ಅನ್ನೋ ಆಸೆಯಿಂದ. ಇನ್ನೇನು ಸರಿಹೋಯ್ತು ಅನ್ನಿಸೋವಾಗ್ಲೆ, ಇನ್ನೊಂದು ತರ ಪ್ರತ್ಯಕ್ಷ ಆಗುತ್ತೆ. ಯಾಕೆ ಹೀಗೆ? ಯೋಚನೆಗಳ ಅಲೆಗಳು ಬಂದು ತೀರದ ಬಂಡೆಗೆ ಬಡಿದು ಎಚ್ಚರಿಸುತ್ತೆ, ಯೋಚನೆಗಳಲ್ಲಿ ನಿನ್ನ ಕಳೆದುಕೊಳ್ಳುತಿದ್ದೀಯ ಎಂದು. ಇದು ಒಂಟಿತನದ ಭಯವಲ್ಲ. ಕಾಯುವಿಕೆಯ ನೋವು. ಘೋರ ತಪಸ್ಸಿಗೆ ಕೂತು ಯಾವ ದೇವರನ್ನು ಮೆಚ್ಚಿಸಲಿ? ಸಾಕಿನ್ನು ನಿನ್ನ ಬಿಟ್ಟಿರೋ ವನವಾಸ. ನಂಬಿಕೆ ಮೇಲೆ ನಿಂತಿದೆ ಈ ಜೀವ. ನೀ ಬರುವ ನಂಬಿಕೆಯಿದೆ. ಕಾಯುತ್ತಿನಿ ನಿನಗೋಸ್ಕರ. ಅದೆಷ್ಟು ದಿನವಾದರೂ ಸರಿ.

ನಿನ್ನವಳು..

Friday, February 5, 2010

ನೆನಪು ಮತ್ತು ನೀನು



ನಿನ್ನನ್ನು ನೆನೆಸುವ ಇನ್ನೊಂದು ದಿನ ಕಣ್ಣ ಮುಂದೆ. ನೀನಿಲ್ಲದೆ ಹೇಗೆ ಕಳೆಯಲಿ ಎಂದು ಇಂದಾದರೂ ತಿಳಿಸುವೆಯಾ?

ನಾವು ಕೈಬೆಸೆದು ನಡೆದ ಹಾದಿಯಲ್ಲಿ ನಿನ್ನ ಹೆಜ್ಜೆ ಗುರುತುಗಳನ್ನು ಹುಡುಕುತ್ತಿರುವೆ. ಕೈಗಳಲಿ ನಿನ್ನ ಬೆಚ್ಚನೆಯ ಕೈಹಿಡಿತದ ಬಿಸಿಯನ್ನು ಅರಸುತ್ತಿರುವೆ. ನನ್ನಲ್ಲಿ ಇರುವುದು ಮೂರೇ ಮೂರು ಆಸ್ತಿ. ನಿಂಜೊತೆ ಕಳೆದ ಕ್ಷಣಗಳು, ನೀನಿಲ್ಲದೆ ಒಂಟಿಯಾಗಿ ಕಳೆದ ಕ್ಷಣಗಳು, ಹಾಗೂ ಎದೆ ತಾಕಿದ ನಿನ್ನ ಪ್ರೀತಿ. ಪ್ರೀತಿ ಎದೆಯಾಳದಲ್ಲಿ ಬೇರೂರಿ ಹೆಮ್ಮರವಾಗಿ ಬೆಳೆದಿದೆ, ನಿನ್ನ ಪ್ರೀತಿ ಮಳೆಹನಿಯಲ್ಲಿ ಇನ್ನೂ ಬೆಳೆಯುತ್ತಿದೆ. ಒಂಟಿಯಾಗಿ ಕಳೆದ ಕ್ಷಣಗಳಲ್ಲಿ ನೀನಿಲ್ಲವೆಂದುಕೊಳ್ಳಬೇಡ. ನನ್ನಲ್ಲಿರುವುದು ಬರೀ ನೀನು. ಇರುವ ಒಂದು ಕೊರತೆಯೆಂದರೆ, ನಿನ್ನ ನೆನೆಸಿಕೊಳ್ಳದ ಕ್ಷಣಗಳ ಕೊರತೆ. ನಿನ್ನ ಹೆಜ್ಜೆಗುರುತಿನ ಹುಡುಕಾಟ ನಡೆಸುವಾಗಲೂ, ನೀನೂ ಕೂಡ ನನ್ನೊಡನೆ ಹುಡುಕುತ್ತಿದ್ದಿಯ ಅನಿಸುತ್ತದೆ. ಕಾಣದ ನಿನ್ನನ್ನು ತಬ್ಬಿಕೊಳ್ಳೋಣ ಅನಿಸುತ್ತದೆ. ಆಗಲೇ ಬರೋದು ಆ ಅತೀವ ನೋವು. ಎದೆ ಹಿಂಡುವ ಸಂಕಟ. ಹೀಗೆ ಶೂನ್ಯದಿಂದ ಮೌನದೆಡೆಗೆ ಅಲೆಯುತ್ತಲೇ ಇರುತ್ತಿದ್ದೇನೆ.

ನಿನ್ನ ನೆನಪನ್ನೇ ಇಷ್ಟೊಂದು ಪ್ರೀತಿಸುತ್ತಿರುವಾಗ, ಇನ್ನು ನಿನ್ನನ್ನು ಹೇಗೆ ಪ್ರೀತಿಸದಿರಲಿ? ಮೌನದಲ್ಲಿ ಕೇಳಿಸುವುದು ನಿನ್ನದೇ ಮಾತು, ನಿನ್ನದೇ ಪ್ರತಿಧ್ವನಿ. ಆಟವಾಡುವ ಮನಸ್ಸಿಗೆ ಪ್ರೀತಿಯ ಗಂಭೀರತೆಯನ್ನು ನೀಡಿದವನು ನೀನು. ಮೌನದಲ್ಲೇ ನಿನ್ನೊಂದಿಗೆ ಹರಟುವ ಕಲೆಯನ್ನು ನಾನು ಕಲಿತಾಗಿದೆ. ಈ ಪ್ರೀತಿ ತೀವ್ರತೆಯನ್ನು ಹೇಗೆ ತಿಳಿಸಲಿ ನಿನಗೆ? ವ್ಯಕ್ತವಾಗದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವೆಯ?

ಕಣ್ಮುಚ್ಚು, ನಾ ಬರುವೆ ಎನ್ನುತ್ತಿಯ?? ಹಾಗಿದ್ದರೆ ಮುಚ್ಚಿದ ಕಂಗಳಲಿ ಜೀವನ ಕಳೆಯಲೂ ನಾ ತಯಾರು. ಹೀಗೆ ಇಲ್ಲಿ, ಅಲ್ಲಿ, ಎಲ್ಲೆಲ್ಲೂ ನೀನಿರುವಾಗ ನಿನ್ನ ಹುಡುಕಬೇಕೆ ನಾನು? ಕಣ್ಮುಚ್ಚಿದಾಗ ಕಂಡಿದ್ದು ನೀನು ಮತ್ತು ನೀ ಹಿಡಿದ ಕೆಂಪು ಗುಲಾಬಿ. ನನಗಾಗಿ ತಂದಿರುವೆಯಲ್ಲ? ಬೇಗನೆ ನೀಡು. ಮನಸನ್ನು ನೀ ಕೊಟ್ಟ ಹೂದಳಗಳಲ್ಲಿ ಶ್ರಂಗರಿಸಬೇಕೆಂದಿರುವೆ. ನಿನ್ನೆಲ್ಲ ಸವಿನೆನಪು ಹೀಗೆ ಹಸಿರಾಗಿರಲಿ. ಪ್ರೀತಿ ಬಳ್ಳಿಗೆ ಕೋಟಿ ಚಿಗುರು ಮೂಡಲಿ. ಎರಡು ತೀರ ಯಾನ ಬಹುಬೇಗ ಕೊನೆಯಾಗಲಿ..

ನಿನ್ನ ನಿರೀಕ್ಷೆಯಲಿ..
ನಾನು.

Monday, February 1, 2010

ಪ್ರೀತಿ ಪರಿ..


ಪ್ರೀತಿ ಅದೆಷ್ಟು ಮುಗ್ಧ. ತನ್ನವನ ಬಗ್ಗೆ ಸಾವಿರ ಕನಸುಗಳನ್ನು ಕಟ್ಟಿ, ಅವೆಲ್ಲವನು ಕಣ್ಣೊಳಗೆ ಬಚ್ಚಿಟ್ಟು, ಅವನಿಗೋಸ್ಕರ ಕಾಯುವ ಪರಿ. ಬಚ್ಚಿಟ್ಟ ಪ್ರತಿಯೊಂದು ಕನಸನ್ನು ಅವನೆದುರು ಬಿಚ್ಚಿಟ್ಟು ಹಂಚಿಕೊಳ್ಳುವ ಪರಿ. ಅವನ ಬಾಹುಗಳಲ್ಲಿ ಬಂಧಿಯಾಗಿ, ಬಾನಿನಲ್ಲಿ ಯಾವುದೋ ಕಾಣದ ತಾರೆಯನ್ನು ದಿಟ್ಟಿಸುತ್ತಾ ತಾನೆಷ್ಟು ಸುಖಿ ಅಂದುಕೊಳ್ಳುವ ಪರಿ. ಅವನ ಹಿಂದೆ ಮುಂದೆ ಯಾವಾಗಲೂ ಓಡಾಡುತ್ತ ಇರಬೇಕು ಅಂದುಕೊಳ್ಳುವ ಪರಿ. ಅವನ ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತು ಹೇಗೆ ಕಾಣಿಸ್ತಿದಿನಿ ಎಂದು ನೋಡಿಕೊಳ್ಳುವ ಪರಿ. ಅವನ ಬಟ್ಟೆ ಘಮವನ್ನು ಆಸ್ವಾದಿಸುವ ಪರಿ. ಅವನ್ನು ನೋಡಲೇಬೇಕೆಂದು ಹಠ ಹಿಡಿಯುವ ಪರಿ. ನೋಡಿದೊಡನೆ ಎದೆ ಹೊಡೆದುಕೊಳ್ಳುವ ಪರಿ. ಕ್ಷಣವೇ ಅಪ್ಪಿಕೊಳ್ಳೋಣ ಎಂದು ಅನಿಸುವ ಪರಿ. ಹುಚ್ಚುತನ ಅನಿಸಿದರೂ ಅವನಿಗೋಸ್ಕರ ಏನಾದರು ಮಾಡುವ ಪರಿ.



ಪ್ರೀತಿ ಯಾವತ್ತೂ ನಿಂತ ನೀರಲ್ಲ. ಸದಾ ಹರಿಯುವ ನದಿ. ಪ್ರೀತಿಗೆ ಗೆರೆ ಎಳೆದು, ಇಷ್ಟೇ ಪ್ರೀತಿ ಮಾಡಲು ಸಾಧ್ಯ, ಇದರಾಚೆಯ ಪ್ರಪಂಚ ಪ್ರೀತಿಗೆ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಕಾಲಕ್ರಮೇಣ ಪ್ರೀತಿ ಪ್ರಬುದ್ಧತೆ ಪಡೆಯಬಹುದೇ ಹೊರತು, ನಿಂತ ನೀರಂತೆ ಆಚಲಿತವಾಗಲ್ಲ. ಪ್ರತಿ ಹೆಣ್ಣು ತನ್ನ ಹುಡುಗನಲ್ಲಿ ಹುಚ್ಚು ಪ್ರೀತಿ ನೋಡಬಯಸುತ್ತಾಳೆ. ತನ್ನನ್ನು ಮಿತಿ ಮೀರಿ ಪ್ರೀತಿಸಬೇಕು ಎಂದು ಬಯಸುತ್ತಾಳೆ. ಪ್ರತೀ ನೋಟದಲ್ಲೂ ಪ್ರೀತಿ ಹುಡುಕುತ್ತಾಳೆ. ಪ್ರತೀ ಮಾತಲ್ಲೂ ಪ್ರೀತಿ ನಿರೀಕ್ಷಿಸುತ್ತಾಳೆ. ತನ್ನೊಡನೆ ಕಷ್ಟವನ್ನು, ಸುಖವನ್ನು ಹಂಚಿಕೊಳ್ಳಬೇಕೆಂದು ಇಷ್ಟ ಪಡುತ್ತಾಳೆ.



ಯಾಕಿಷ್ಟು ಪೀಠಿಕೆ? ಹೇಳಬೇಕಾಗಿದ್ದು ಒಂದೇ ಒಂದು. ಕೊನೆಯುಸಿರು ಇರುವವರೆಗೂ ಅವನಿಂದ ಹುಚ್ಚು ಪ್ರೀತಿ ಬಯಸುತ್ತಿದೆ ಈ ಹುಚ್ಚು ಮನಸು. ಅವನ ಒಮ್ಮೆ ನೋಡಲು ಹಂಬಲಿಸುತ್ತಿದೆ ಈ ಹುಚ್ಚು ಮನಸು.


ಅವನಿಲ್ಲೇ ನನ್ನೊಳಗೆ ಇರುವನು. ಕದಡಿದ ಮನಕ್ಕೆ ಸಾಂತ್ವನ ನೀಡುವನು.