Monday, June 21, 2010

ನಾನಿಲ್ಲವೇ...

ಗೆಳೆಯ..
ಸುಮ್ಮನೆ ಬೇಸರವೇ,
ಹೇಳಲಾಗದ ಗೊಂದಲವೇ,
ತಳಮಳ ಮರೆತು ನಗು ಒಮ್ಮೆ
ನಿನ್ನೊಡನೆ ನಾನಿಲ್ಲವೇ?

ಜಗದ ವಿಕೃತಿ ಬರದಿರಲಿ
ನಿನ್ನ ಮೃದು ಮನಸಿನೆದುರು,
ಅವೆಲ್ಲವೂ ನನಗಿರಲಿ,
ಸಂತೋಷವೊಂದೆ ನಿನಗಿರಲಿ
ನಿನ್ನ ಮುಗ್ಧ ನಗುವಿನೆದುರು ದುಃಖವೂ ಒಂದು ಲೆಕ್ಕವೇ?
ಹೇಳು ಗೆಳೆಯ, ನಿನ್ನೊಡನೆ ನಾನಿಲ್ಲವೇ?

ಚೈತನ್ಯವಿರಲಿ ನಿನ್ನ ಪ್ರತಿ ಕ್ಷಣದಲಿ,
ಬೇಸರದ ಎಳೆಯೂ ಸಹ ಅಲ್ಲಿ ಸುಳಿಯದಿರಲಿ,
ಕೈಹಿಡಿದ ನಮ್ಮ ಕೈಗಳು ಇನ್ನೂ ಬಿಗಿಯಾಗಲಿ,
ಹೊಸ ಹಾದಿಯಲಿ ಹೂವುಗಳು ನಲಿಯಲಿ,
ಹೊಸ ಜೀವ ಅರಳಲಿ,
ಇನ್ನು ಚಿಂತೆಯೇಕೆ ಗೆಳೆಯ,
ನಿನ್ನಲ್ಲಿ ನಾನಿಲ್ಲವೇ?
ನಾನೇ ನಿನಗಲ್ಲವೇ? 

Tuesday, June 8, 2010

ನೆನಪಿನ ಅಲೆ

ತಂಪು ಮಳೆ ಹನಿಯೊಂದು ಮೈಸೋಕಿ ಎಚ್ಚೆತ್ತೆ. ಗಾಳಿ ಮೆಲ್ಲಗೆ ತಂಪಾಗಿ ಬೀಸುತಿತ್ತು. ತನ್ನ ಜೊತೆ ಅದ್ಯಾವುದೋ ಮರೆತ ನೆನಪನ್ನು ತಂದಂತೆ ಅನಿಸುತಿತ್ತು. ಅಲೆಗಳತ್ತ ಕಣ್ಣು ಹಾಯಿಸಿದೆ. ಅಲೆಗಳ ಬಡಿತ ಎಂದಿನಂತಿಲ್ಲ ಅನಿಸಿತು. ಪ್ರತಿ ಅಲೆಯೂ ವಿಶೇಷವಾಗಿದೆ ಅನಿಸತೊಡಗಿತು. ಚಿಕ್ಕ ಅಲೆ, ಅತಿ ದೊಡ್ಡ ಅಲೆ, ಸಾಧಾರಣವಾದ ಅಲೆ, ಬಂಡೆಗೆ ಬಡಿದು ಮೇಲೆ ಜಿಗಿಯುವ ಅಲೆ ಪ್ರತಿಯೊಂದೂ ಕೂಡ ನೆನಪುಗಳಂತೆ ವಿಭಿನ್ನ ಅನಿಸಿತು. ಪ್ರತಿಯೊಂದು ನೆನಪು ಕೂಡ ಅಲೆಯಂತೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆ. ಅಲೆಗಳು ತೀರಕ್ಕೆ ಬಂದು ಬಡಿಯುವಂತೆ, ನೆನಪುಗಳು ಮನಸಿನ ತೀರಕ್ಕೆ ಬಡಿಯುವುದು. ನೆನಪುಗಳಲ್ಲಿ ಕೆಲವೊಂದು ದೊಡ್ಡ ಅಲೆಗಳಂತೆ, ಮನಸಲ್ಲಿ ಬಹುಕಾಲ ಉಳಿಯುವಂತಹುದು. ಇನ್ನು ಕೆಲವು ಮರು ಕ್ಷಣವೇ ಮರೆಯುವಂತಹುದು. ಪ್ರತಿ ಕ್ಷಣವೂ, ಮರುಕ್ಷಣವೇ ನೆನಪಾಗಿ ಬದಲಾಗುತ್ತವೆ.

ಹಾಗೆ ಅಲೆಗಳನ್ನು ದಿಟ್ಟಿಸುತ್ತಿದ್ದಂತೆ ಪ್ರಕೃತಿಯೂ ಕೂಡ ಯಾಂತ್ರಿಕವಾದಂತೆ ಕಾಣಿಸಿತು. ಸಾಗರವು ಅಲೆಗಳನ್ನು ತಯಾರಿಸುವ ಒಂದು ಯಂತ್ರದಂತೆ ಅನಿಸಿತು. ಯಾಕೋ ಸರಿ ಕಾಣಲಿಲ್ಲ. ಮೇಲೆದ್ದೆ. ಕೆಂಪಾದ ಸೂರ್ಯ ಇನ್ನೇನು ಮುಳುಗುವವನಿದ್ದ. ಸಾಗರದ ನೀರ ಮೇಲೆಲ್ಲಾ ಯಾರೋ ಕೆಂಪು ಬಣ್ಣ ಚಿಮುಕಿಸಿದಂತೆ ಕಾಣಿಸಿತು. ಪ್ರಕೃತಿಯನ್ನು ಯಂತ್ರಕ್ಕೆ ಹೋಲಿಸಿದ ನನ್ನ ಬಗ್ಗೆ ನನಗೇ ಬೇಜಾರಾಯ್ತು. ಹಾಗೆ ಮರಳು ಹಾಸಿದ ನೆಲದಲ್ಲಿ ಪಾದವೂರಿಸಿ ಮತ್ತೆ ಹಿಂದಕ್ಕೆ ತಿರುಗಿ ನನ್ನ ಹೆಜ್ಜೆಗುರುತುಗಳನ್ನು ನೋಡುತ್ತಾ ನಡೆದೆ. ಮನಸು ಅಲೆಗಳ ಜೊತೆ ಉತ್ಸಾಹದಿಂದ ಕುಣಿಯುತಿತ್ತು.  

Wednesday, June 2, 2010

ಬೆಳಗಿನ ಸಮಾಚಾರ

ಮುಂಜಾನೆ ಮಬ್ಬಲ್ಲಿ ನಿನ್ನ ಮುಖ ನೋಡಿ ಎದ್ರೇನೆ ದಿನಕ್ಕೆ ನ್ಯಾಯ ಸಿಕ್ಕ ಹಾಗೆ. ಬೆಳಗಿನ ಅವಸರದಲ್ಲಿ ನಿಂಜೊತೆ 10 sentence ಕೂಡ complete ಆಗಿ ಮಾತಾಡಕ್ಕೆ ಆಗಲ್ಲ. ನೀನು ready ಆಗಿ ಹೊರಟಾಗಲೇ "ಅಬ್ಬಾ! ಅಂತೂ ಲೇಟ್ ಆಗಿಲ್ಲ" ಅನ್ಸೋದು.

ಅದೊಂತರಾ ನಗು. ರಸ್ತೆಯ ಬದಿಯಲ್ಲಿ ಇನ್ನೇನು ಮರೆಯಾಗ್ಬೇಕು ಅನ್ನೋವಷ್ಟರಲ್ಲಿ ನನ್ನ ಕಡೆ ಒಂದ್ಸಲ ತಿರುಗಿ ನೋಡ್ತಿಯಲ್ಲ, ಅದನ್ನ ನೋಡಿ ನನಗೇ ಬರೋ ಮುಗುಳ್ನಗು. ನಿನ್ನ ತಯಾರಿ ಮುಗಿದ ಮೇಲೆ ಇನ್ನು ನನ್ನ ತಯಾರಿ ಶುರು ಮಾಡುವುದು ಈ ಮುಗುಳ್ನಗು. ಎರಡು ತಯಾರಿಗಳ ನಡುವೆ ಬರೋ ಈ break ನಂಗೆ ತುಂಬ ಇಷ್ಟವಾದ ಸಮಯ. ಮರೆಯಾಗುವ ತನಕ ನಿನ್ನ ನೋಡ್ತಾ ಬಾಲ್ಕನಿಲಿ ಕೂತಿದ್ರೆನೆ ಸಮಾಧಾನ. ಮನಸು ಮಲ್ಲಿಗೆಯಷ್ಟು ಹಗುರ(ಕುಂದಾಪುರದ ಹಗುರ ಅಲ್ಲ :)). ಇಲ್ಲವಾದರೆ ಆ ಅಮೂಲ್ಯ ಮುಗುಳುನಗುವಿನ ಸೌಭಾಗ್ಯ ನನಗೆ ಸಿಗುವುದೇ?

ಆ ಮೇಲಿನ 30 ನಿಮಿಷದಲ್ಲಿ ಉಸಿರಾಡಲೂ ಕೂಡ ಮರೆತು ಹೋಗುವಷ್ಟು occupied ಆಗಿಬಿಡ್ತೀನಿ. ನಾನು ರೆಡಿ ಆಗಿ ಮನೆ ಬಾಗಿಲು ಹಾಕೊವಷ್ಟರಲ್ಲಿ ಮನಸು ಮುಂದಿನ ಒಂದು ನಿಮಿಷದ ಓಟಕ್ಕೆ ತಯಾರಾಗುತ್ತಿರುತ್ತದೆ. ಬಸ್ ಮಿಸ್ ಆಗೋದು ಬೇಡ ದೇವರೇ ಅಂದುಕೊಂಡು ಬೇಗ ಬೇಗ ಹೆಜ್ಜೆ ಹಾಕಿ ಬಸ್ ಸ್ಟ್ಯಾಂಡ್ ಗೆ ಬರೋವಷ್ಟರಲ್ಲಿ ಸುಸ್ತೋ ಸುಸ್ತು. ಅಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ಹಸಿರು ದೀಪಕ್ಕೆ ಕಾಯುವ ಆಫೀಸ್ ಬಸ್ ನ ನೋಡಿದಾಗ ದೇವರೇ ನನ್ನ ಪ್ರಾರ್ಥನೆ ಆಲಿಸಿ ಕೆಂಪು ದೀಪ ಹಾಕಿದಾನೆ ಅನ್ನಿಸೋದು.  

ಸಮಾಚಾರ್ ಸಮಾಪ್ತ್. ಸಂಜೆ ಸಿಗೋಣ :)

Tuesday, June 1, 2010

ಸುಮ್ಮನೆ..

ಇಷ್ಟೊತ್ತು ನಿನ್ನ photo ನೋಡ್ತಾ ಇದ್ದೆ. ಬ್ಲಾಗ್ನಲ್ಲಿ ನಾವಿಬ್ರು ಕೈ ಹಿಡ್ಕೊಂಡಿರೋ ಫೋಟೋ. ನಿನ್ನ ಕೈಯಲ್ಲಿ ಎಷ್ಟು ಪ್ರೀತಿ ಇದೆ ಅಂತ ಹುಡುಕುತ್ತಾ ಇದ್ದೆ. ನಿನ್ನ ಕೈಯಲ್ಲಿ ನಿನ್ನ ಮನಸನ್ನು ಓದ್ತಾ ಇದ್ದೆ.  ಅದರ ಪಕ್ಕದಲ್ಲೇ ಬರೆದಿದೀನಿ "ಅನೂಹ್ಯ" ಅಂತ. ಬ್ಲಾಗ್ ಗೆ ಇಟ್ಟಿರೋ ಹೆಸರು ಅದು. ಈಗ ಅನ್ನಿಸ್ತ ಇತ್ತು, ಫೋಟೋಗೆ ಇಟ್ಟಿರೋ ಹೆಸರಾ ಅಂತ. ನೀನು ನನ್ನ ಕೈ ಹಿಡಿತೀಯ ಅಂತ ದೇವರು ನಂಗೆ  ಯಾವ ಸೂಚನೆ ಕೂಡ ಕೊಟ್ಟಿರಲಿಲ್ಲ. ನಿನಗೂ ಕೂಡ ಕೊಟ್ಟಿರಲಿಲ್ಲ ಅಲ್ವ. ಇದನ್ನ ದೇವರು ಮೊದಲೇ ತೀರ್ಮಾನ ಮಾಡಿದ್ರ ಅಥವಾ sudden decision ತಗೊಂಡ್ರ ಅಂತ ಗೊತ್ತಾಗ್ಲಿಲ್ಲ. ಆದ್ರೆ ನೀನು ನಂಗೆ ಸಿಕ್ಕಿದಿಯ. ಇದಕ್ಕೆ ಪ್ರತಿಯಾಗಿ ನಿಂಗೆ ನಾನು ಏನು ಕೊಡಲಿ? ನಿಂಗೆ ಕೊಡೋವಷ್ಟು worth gift ನನ್ನ ಹತ್ರ ಇದೆಯಾ? ನನ್ನ ಹತ್ರ ಇರೋದು ಬರಿ silly things . ಈ silly things ಎಲ್ಲ ನಂಗೆ ಇರಲಿ. ನಿನಗೋಸ್ಕರ ಏನು ಕೊಡಲಿ? ಇದು ಎಷ್ಟೋ ದಿನದಿಂದ ಕಾಡ್ತಾ ಇರೋ ಪ್ರೆಶ್ನೆ. ನನ್ನಿಂದ ಉತ್ತರ ಸಿಗೋ ನಂಬಿಕೆ ಇಲ್ಲ. ಯಾಕೆ ಅಂದ್ರೆ ನಿಂಗೆ ಕೊಡೋಕ್ಕೆ ಆಗೋವಷ್ಟು precious gift ಈ silly ತಲೆಗೆ ಹೇಗೆ ಹೊಳಿಯುತ್ತೆ? ನಿನ್ನ ಪ್ರೀತ್ಸೋದೊಂದೇ ಗೊತ್ತಿರೋದು ನಂಗೆ. ನಿನ್ನ ಪ್ರೀತ್ಸೋದು ಬಿಟ್ಟು ಬೇರೇನೂ ಇಲ್ಲ ನಂಗೆ. ನಿಂಗೆ ಏನು ಬೇಕು ಅಂತ ನೀನೆ ಹೇಳ್ತಿಯ? ಈ ಮನಸು confuse ಆಗಿ ನಿನ್ನ ತಲೆ ಕೆಡಿಸೋ ಮುಂಚೆ ಹೇಳ್ತಿಯ ಪ್ಲೀಸ್? ಹಾಗಾದ್ರೆ appointment ತಗೊಂಡು ಬಿಡಲಾ ಇವತ್ತು ಸಂಜೆ?

ಹೇಳು..

ಕಾಣದ ಕನಸನ್ನು ಮಡಿಲಲ್ಲಿಟ್ಟು, ಕನಸಿಗೆ ಚೈತನ್ಯ ತಂದವನು ನೀನು. ಆ ಕನಸಲ್ಲಿ ನನ್ನನ್ನೇ ಮರೆತವಳು ನಾನು. ಪ್ರೀತಿಯನ್ನು ದೂರ ತಾರೆ ಅಂದುಕೊಂಡವಳು ನಾನು. ಮಿನುಗುವ ತಾರೆಗಳ ನಡುವೆ ನಗುವ ಚಂದಿರ ನೀನು. ನನಗೇ ತಿಳಿಯದೆ ನನ್ನನ್ನು ಸೋಲಿಸಿದ ಚೆಲುವ ನೀನು. ಬರಡಾಗಿದ್ದ ಹೃದಯದಲ್ಲಿ ಒಲವಿನ ಮಳೆಹನಿ ಚಿಮುಕಿಸಿದವನು ನೀನು. ಪ್ರೇಮದ ಅಕ್ಕರೆ ತೋರಿದ ಗೆಳೆಯ ನೀನು. ನೋವಿಗೆ ಹೆಗಲು ನೀಡಿದ ಸ್ನೇಹಿತ ನೀನು. ಕಾಳಜಿ ತೋರಿದ ಸಂಗಾತಿ ನೀನು.

ಇಲ್ಲೆಲ್ಲೂ ನನ್ನ ಅಸ್ತಿತ್ವವಿಲ್ಲ. ನನ್ನೋಳಗಿರುವುದು ನೀನಷ್ಟೇ, ನಾನಲ್ಲ. ನನ್ನನ್ನು ಎಲ್ಲಿ ಕಳೆದುಕೊಂಡೆ ಎಂದು ಕೂಡ ತಿಳಿದಿಲ್ಲ. ನನ್ನ ಅಸ್ತಿತ್ವವನ್ನು ನಿನ್ನೊಳಗೆ ಕಾಣಬೇಕು ಎನ್ನುವುದೇ ನನ್ನ ಒಂದೇ ಒಂದು ಕೋರಿಕೆ.

ನಿನ್ನ ಹೃದಯದಲಿ ನನ್ನನ್ನು ತುಂಬಿಕೊಳ್ಳುವೆಯ? ನೆಲೆ ಮರೆತ ಈ ಹೃದಯಕ್ಕೆ ನಿನ್ನಲ್ಲಿ ಆಶ್ರಯ ನೀಡುವೆಯ? ಕತ್ತಲು ತುಂಬಿದ ಈ ಹಾದಿಗೆ ನಂದಾದೀಪವಾಗುವೆಯ?

Wednesday, May 12, 2010

ನಿನ್ನ ಸವಿನೆನಪೇ..

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ..

ನಿನಗೋಸ್ಕರ ಬರೆದಿರೋ ನನ್ನ ಡೈರಿಯಲ್ಲಿ ಮೊದಲ ಪುಟದ ಮೊದಲ ಪದಗಳಿವು. ಈ ಹಾಡು ಮೊದಲಿನಿಂದನೂ ಇಷ್ಟ ಆಗ್ತಾ ಇತ್ತು. ಅಮ್ಮ ಹೇಳಿ ಕೊಟ್ಟಿರೋ ಹಾಡು ಇದು. ನೀನು ಬಂದ ಮೇಲೆ ಇನ್ನು ಜಾಸ್ತಿ ಇಷ್ಟ ಆಗ್ತಿದೆ. ನಿನಗೋಸ್ಕರ ಯಾವಾಗಲೂ ಹಾಡಬೇಕು ಅನ್ಸುತ್ತೆ. ಬೆಳಿಗ್ಗೆ ಗಡಿಬಿಡಿಯಲ್ಲಿ ನಿಂಗೆ ಸರಿಯಾಗಿ bye ಹೇಳೋಕ್ಕೂ ಆಗ್ಲಿಲ್ಲ. ಆಫೀಸಿಗೆ ಬಂದು ಅದೇ ಯೋಚನೆಯಲ್ಲಿ ಬೇಜಾರಾಗ್ತಾ ಇರುತ್ತೆ. ಏನಾದ್ರು ಬರೆಯೋಣ ಅಂದ್ರೆ ನಿನ್ನ ವಿಷಯ ಬಿಟ್ರೆ ಬೇರೆ ಏನು ಸಿಗಲ್ಲ. ನಿಂಗೊತ್ತಾ ನಿನ್ನ ಬಗ್ಗೆ ಬರೆಯೋದೇ ನಂಗಿಷ್ಟ. ನೆನಪಿದೆಯ ನಿಂಗೆ? ಅವತ್ತು ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಇಬ್ರು ಕೂತ್ಕೊಂಡು ಮಾತಾಡ್ತಾ ಇದ್ದಿದ್ದು? ಮಾತಾಡೋಕ್ಕೆ ಆಗ್ತಿರ್ಲಿಲ್ಲ ನನ್ನಿಂದ. ಗಂಟಲು ಕಟ್ಟಿ ಬಂದು ಹೇಳಬೇಕಗಿರೋದನ್ನೆಲ್ಲ ನುಂಗಿದ್ದೆ. ಅವತ್ತೇ ಕೊನೆ ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಕೂತ್ಕೊಂಡಿದ್ದು. ನಂತರ ಒಂದು ದಿನ ನೀನು ಪಕ್ಕದಲ್ಲೇ ಪಿಸುಗುಟ್ಟಿದ್ದೆ, ಇನ್ಮುದೆ ಚೆನ್ನೈಗೆ ಹೋಗೋ ಹಾಗಿಲ್ಲ ಅಂತ. ಅವತ್ತೇ ನಾನು ತೀರ್ಮಾನ ಮಾಡಿದ್ದು, ಇನ್ಮುಂದೆ ನಮ್ಮ ಮಧ್ಯ ದೂರ ಅನ್ನೋದೇ ಬರಬಾರದು ಅಂತ. ನಿನ್ನ ಸಾಮಿಪ್ಯವೇ ನನ್ನ ನೆಮ್ಮದಿ.

ಆಮೇಲೆ ನೀನು ಇಲ್ಲಿಗೆ ಬಂದ ನಂತರ ಡೈರಿ ಬರೆಯೋದೇ ನಿಂತೋಗಿದೆ!! ಒಂದ್ಸಲನಾದ್ರೂ ಕುತೂಹಲಕ್ಕೆ ನನ್ನ ಡೈರಿನ ನೋಡಿದಿಯ ಏನಾದ್ರು ಬರೆದಿದ್ದಿನ ಅಂತ? ಅದೇನೋ ಅಲ್ಪ ಸ್ವಲ್ಪ ಬರೆದಿರಬಹುದು. ಈಗ life ಅನ್ನೋದು busy ಆಗೋಗಿದೆ. ಬರೆಯೋದಿರಲಿ, ಓದೋದಕ್ಕೂ ಟೈಮ್ ಸಾಕಾಗ್ತಿಲ್ಲ. ಆದ್ರೆ ನೀನು ನನ್ನ ಹತ್ತಿರ ಇದ್ದೀಯ ಅನ್ನೋ ಭಾವನೆನೇ ಖುಷಿ ಕೊಡುತ್ತೆ. ಏನೇ ಕೆಲಸ ಮಾಡ್ತಾ ಇದ್ರುನು ನೀನು ಪಕ್ಕ ಇರ್ಬೇಕು ಅನ್ಸುತ್ತೆ. ಆದ್ರೆ ಆಫೀಸ್ನಲ್ಲಿ ವಿಧಿಯಿಲ್ಲ. ಅದ್ಕೆ ನೀನು ತುಂಬ ನೆನಪಾಗ್ತಾ ಇರ್ತಿಯ. ಅವಾಗ್ಲೇ ಈ ಹಾಡು ಕೂಡ ನೆನಪಾಗೋದು. 

ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ.. 

ತುಂಬ ನೆನಪಾಗ್ತಾ ಇದ್ದೀಯ..  

Tuesday, May 11, 2010

ಜೀವನ..

ಸಂಭಂದದ ಎಳೆಗಳು ಎಲ್ಲಿ ಜೋಡಣೆಯಾಗುವುದೋ, ಎಲ್ಲಿ ಎಳೆ ಸಡಿಲವಾಗಿ ಬಿಚ್ಚಿಕೊಳ್ಳುವುದೋ ಯಾರೂ ಮುಂದಾಗಿ ತಿಳಿಯಲಾರರು. ಬೇಡವಾಗಿರುವ ಸಂಭಂದಗಳನ್ನು ಸುಲಭದಲ್ಲಿ ಕಿತ್ತೆಸೆಯಬಹುದು. ಆದರೆ ಬೇಕೇ ಬೇಕಾಗಿರುವ ಸಂಭಂದಗಳನ್ನು ಅಷ್ಟು ಸುಲಭದಲ್ಲಿ ಮುರಿಯಲಾಗುವುದಿಲ್ಲ. ಮನಸು ಕೇಳದು. ಆದರೆ ಜೀವನದ ಕೆಲವು ಕ್ಲಿಷ್ಟ ಸಂದರ್ಭಗಳು ಇವೆಲ್ಲವನ್ನೂ ನಮ್ಮಿಂದ ಮಾಡಿಸುತ್ತದೆ. ಮುಂದೆ ಜೀವನ ನಡೆಯಬೇಕಾದರೆ ಕೆಲವು ತ್ಯಾಗ, ಕೆಲವು ಹೊಂದಾಣಿಕೆ ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ. ಜೀವನದಲ್ಲಿ ಊಹಿಸಲಾಗದ ತಿರುವುಗಳು ಬದುಕಿನ ದಾರಿಯನ್ನೇ ಬದಲಿಸಿ, ಮುಂದೇನಾಗುವುದು ಎಂಬ ಅತಿ ದೊಡ್ಡ ಪ್ರಶ್ನಾರ್ತಕ ಚಿನ್ಹೆಯನ್ನು ನಮ್ಮೆದುರು ತಂದಿಡುವುದು. ಆಗಲೇ ಎಲ್ಲವು uncertain ಅನ್ನಿಸೋಕೆ ಶುರುವಾಗುವುದು.

ಇದೆ ಜೀವನ. ಹೊಸ ಸಂಬಂಧದಲ್ಲಿ ಅರ್ಥ ಹುಡುಕಿ ಬದುಕೋದೇ ಮುಂದಿನ ಹೊಸ ದಾರಿಯಲ್ಲಿ ಅಳವಡಿಸಿಕೊಳ್ಳಬೇಕಾದುದು. ಪ್ರತಿಯೊಂದು ದಾರಿಗೂ ಅದರದ್ದೇ ಆದ ವಿಶಿಷ್ಟವಾದ ಗುರಿ. ಹೊಸ ಹಾದಿಯಲ್ಲೂ ಕೂಡ ಹೂವುಗಳಿರುವುದು. ಹಕ್ಕಿಗಳ ಚಿಲಿಪಿಲಿಗಳಿರುವುದು. ಹೊಸ ಅನುಭವಗಳಿರುವುದು. ಹೊಸ ನಗು ಇರುವುದು. ಹೊಸ ಆಸೆ, ಹೊಸ ಬಯಕೆ, ಸಂತೋಷ, ಸಡಗರ, ಹೊಸ ಗೆಳೆತನ ಇರುವುದು. ಮನಸು ಬಿಚ್ಚಿ ಭಾವನೆ ಹಂಚಿಕೊಳ್ಳಲು ಪ್ರೀತಿ ಪಾತ್ರರದವರೂ ಸಿಗುವರು. ಯಾರಿಗ್ಗೊತ್ತು, ಎಲ್ಲಿಯೂ ಸಿಗದ ಅಮೂಲ್ಯ ಪ್ರೀತಿ ಇಲ್ಲಿಯೇ ಸಿಗುವುದು. ವಿಷಾದಗಳೆಲ್ಲವನ್ನೂ ಕಟ್ಟಿಟ್ಟು, ಹೊಸ ಜೀವನಕ್ಕೆ, ಹೊಸ ಪ್ರೀತಿಗೆ ಮೈ ಒಡ್ಡಿ, ಹೊಸ ಗುರಿಗಳೊಂದಿಗೆ ಮುಂದುವರೆಯುವುದೇ ಬದುಕು.