Tuesday, June 8, 2010

ನೆನಪಿನ ಅಲೆ

ತಂಪು ಮಳೆ ಹನಿಯೊಂದು ಮೈಸೋಕಿ ಎಚ್ಚೆತ್ತೆ. ಗಾಳಿ ಮೆಲ್ಲಗೆ ತಂಪಾಗಿ ಬೀಸುತಿತ್ತು. ತನ್ನ ಜೊತೆ ಅದ್ಯಾವುದೋ ಮರೆತ ನೆನಪನ್ನು ತಂದಂತೆ ಅನಿಸುತಿತ್ತು. ಅಲೆಗಳತ್ತ ಕಣ್ಣು ಹಾಯಿಸಿದೆ. ಅಲೆಗಳ ಬಡಿತ ಎಂದಿನಂತಿಲ್ಲ ಅನಿಸಿತು. ಪ್ರತಿ ಅಲೆಯೂ ವಿಶೇಷವಾಗಿದೆ ಅನಿಸತೊಡಗಿತು. ಚಿಕ್ಕ ಅಲೆ, ಅತಿ ದೊಡ್ಡ ಅಲೆ, ಸಾಧಾರಣವಾದ ಅಲೆ, ಬಂಡೆಗೆ ಬಡಿದು ಮೇಲೆ ಜಿಗಿಯುವ ಅಲೆ ಪ್ರತಿಯೊಂದೂ ಕೂಡ ನೆನಪುಗಳಂತೆ ವಿಭಿನ್ನ ಅನಿಸಿತು. ಪ್ರತಿಯೊಂದು ನೆನಪು ಕೂಡ ಅಲೆಯಂತೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆ. ಅಲೆಗಳು ತೀರಕ್ಕೆ ಬಂದು ಬಡಿಯುವಂತೆ, ನೆನಪುಗಳು ಮನಸಿನ ತೀರಕ್ಕೆ ಬಡಿಯುವುದು. ನೆನಪುಗಳಲ್ಲಿ ಕೆಲವೊಂದು ದೊಡ್ಡ ಅಲೆಗಳಂತೆ, ಮನಸಲ್ಲಿ ಬಹುಕಾಲ ಉಳಿಯುವಂತಹುದು. ಇನ್ನು ಕೆಲವು ಮರು ಕ್ಷಣವೇ ಮರೆಯುವಂತಹುದು. ಪ್ರತಿ ಕ್ಷಣವೂ, ಮರುಕ್ಷಣವೇ ನೆನಪಾಗಿ ಬದಲಾಗುತ್ತವೆ.

ಹಾಗೆ ಅಲೆಗಳನ್ನು ದಿಟ್ಟಿಸುತ್ತಿದ್ದಂತೆ ಪ್ರಕೃತಿಯೂ ಕೂಡ ಯಾಂತ್ರಿಕವಾದಂತೆ ಕಾಣಿಸಿತು. ಸಾಗರವು ಅಲೆಗಳನ್ನು ತಯಾರಿಸುವ ಒಂದು ಯಂತ್ರದಂತೆ ಅನಿಸಿತು. ಯಾಕೋ ಸರಿ ಕಾಣಲಿಲ್ಲ. ಮೇಲೆದ್ದೆ. ಕೆಂಪಾದ ಸೂರ್ಯ ಇನ್ನೇನು ಮುಳುಗುವವನಿದ್ದ. ಸಾಗರದ ನೀರ ಮೇಲೆಲ್ಲಾ ಯಾರೋ ಕೆಂಪು ಬಣ್ಣ ಚಿಮುಕಿಸಿದಂತೆ ಕಾಣಿಸಿತು. ಪ್ರಕೃತಿಯನ್ನು ಯಂತ್ರಕ್ಕೆ ಹೋಲಿಸಿದ ನನ್ನ ಬಗ್ಗೆ ನನಗೇ ಬೇಜಾರಾಯ್ತು. ಹಾಗೆ ಮರಳು ಹಾಸಿದ ನೆಲದಲ್ಲಿ ಪಾದವೂರಿಸಿ ಮತ್ತೆ ಹಿಂದಕ್ಕೆ ತಿರುಗಿ ನನ್ನ ಹೆಜ್ಜೆಗುರುತುಗಳನ್ನು ನೋಡುತ್ತಾ ನಡೆದೆ. ಮನಸು ಅಲೆಗಳ ಜೊತೆ ಉತ್ಸಾಹದಿಂದ ಕುಣಿಯುತಿತ್ತು.  

No comments:

Post a Comment