Thursday, September 30, 2010
ಕನಸು
Tuesday, July 27, 2010
ನಿನ್ನ ಹೆಸರಿನ ಎಸಳು..
Tuesday, June 22, 2010
ಕನಸಲಿ ಸಿಗಲೇ?
ಇವತ್ತು ಯಾರ ಕನಸು ಕಾಣುತ್ತ ಇದ್ದೀಯ? ಅಕ್ಕ ಪಕ್ಕದಲ್ಲಿ ಎಲ್ಲಿಯಾದರೂ ನಾನು ಇದಿನಾ? ನನ್ನ ಬಿಟ್ಟು ಒಬ್ಬನೇ ಕನಸು ಕಾಣಬೇಡ ಪ್ಲೀಸ್. ನನ್ನನ್ನು ಒಮ್ಮೆ ಕರೆ. ಅಯ್ಯೋ, ದಿನ ಪೂರ್ತಿ ಕಾಟ ತಡೆಯೋದೆ ಕಷ್ಟ, ಇನ್ನು ಕನಸಲ್ಲಿ ಬೇರೆ ಕರಿಬೇಕಾ ಅಂತ ಅಂದ್ಕೋತ ಇದ್ದೀಯ? ನೀನು ಪ್ರತಿ ಸಲ ನಿನ್ನ ಕನಸಿನ ಬಗ್ಗೆ ಹೇಳಿದಾಗ ಅಲ್ಲಿ ನಾನು ಕೂಡ ಇದಿನಾ ಅಂತ ಯೋಚನೆ ಮಾಡ್ತಾ ಇರುತ್ತೆ ಮನಸು. ಇನ್ನು ನಾನೇನು ಮಾಡ್ಲಿ? ಭಾವನೆಗಳನ್ನ ಕಂಟ್ರೋಲ್ ಮಾಡೋದನ್ನ ನಂಗೆ ಯಾರೂ ಕಲಿಸಲಿಲ್ಲ. ತಿಂಗಳ ಬೆಳಕಲ್ಲಿ ಕಾಣಿಸುತ್ತ ಇರೋ ನಿನ್ನ ಮುಖನ ನೋಡ್ತಾ ಇದ್ರೆ, ಹೇಳ್ದೆ ಕೇಳ್ದೆ ಹಾಗೆ ನುಗ್ಗಿ ನಿನ್ನ ಕನಸಲ್ಲ್ಲಿ ತೂರಿಕೊಳ್ಳೋಣ ಅನ್ಸುತ್ತೆ. ನೀನೇನು ಬೇಜಾರು ಮಾಡ್ಕೊಳಲ್ಲ ಅಂತ ಕೂಡ ನನ್ಗೊತು. ಅದ್ಕೆ ನೀನು ಅಂದ್ರೆ ಅಷ್ಟು ಸಲಿಗೆ. ಆದ್ರೆ promise ಮಾಡ್ತೀನಿ, ಕನಸಲ್ಲಿ ಬಂದು, ನಿಂಗೆ ಬೋರ್ ಆಗ್ತಾ ಇದ್ಯಾ, ಬೇಜಾರಾಗ್ತಾ ಇದ್ಯಾ, ನನ್ನ ಮೇಲೆ ಕೋಪಾನ, ಅಂತ ಸಿಲ್ಲಿ questions ಎಲ್ಲ ಕೇಳಲ್ಲ ಆಯ್ತಾ.
ಮತ್ತೆ, ಕನಸಲ್ಲಿ ಬಂದ ಮೇಲೆ ನನ್ನ ಹಳೆ ರಾಗ, ಕಾಲು ನೋವು, ಕೈ ನೋವು, ತಲೆ ನೋವು ಅಂತ ಹೇಳಿ ನಿಂಗೆ ಕೆಲಸ ಕೊಡಲ್ಲ. ನಿಂಗೆ ತಲೆ ಇದೆ ಅಂತ prove ಆಯಿತು ಅಂತ remind ಮಾಡೋಕ್ಕೆ ಆಸ್ಪದ ಕೊಡೋದೇ ಇಲ್ಲ :) ಕನಸಲ್ಲಿ ಬಂದು ಅದೇ ಹಳೆ ಲುಕ್ ಕೊಟ್ಟು ನನ್ನ ಗುರಾಯಿಸ್ತಾ ಇರ್ತಾಳೆ ಅಂತನೂ ಅಂದ್ಕೋಬೇಡ. ಪ್ರತಿ ದಿನ ಆ ಲುಕ್ ತಗೊಂಡು ನೀನು ಬೋರ್ ಆಗಿ ಹೋಗಿದಿಯ ಅಂತ ನಂಗೊತ್ತು :) ಇಷ್ಟೆಲ್ಲಾ ಹೇಳಿದ ಮೇಲೆ ನನ್ನನ್ನ ನಿನ್ನ ಕನಸಲ್ಲಿ ಕರೆದುಕೊಳ್ತಿಯಲ್ವ? ಹೇಳಿದ ಮಾತಿಗೆ ತಪ್ಪಿದರೆ next time ಕರ್ಕೊಳೋದು ಬೇಡ :)
ಈ ತರ ತಲೆ ತಿನ್ನೋದು ಬಿಟ್ಟು ಇವ್ಳು ಕನಸಲ್ಲ್ಲಿ ಬಂದು ಇನ್ನೇನು ಮಾಡಬಹುದು ಅಂತ ತಲೆ ಕೆಡಿಸಿಕೊಳ್ತಾ ಇದ್ದೀಯ? ನಿನ್ನ ಕನಸಲ್ಲಿ ನಾನು ಬರ್ತಿರೋದು ನಿನ್ನ ಮಾತು ಕೇಳೋಕೆ. ಇವತ್ತು ಮಾತ್ರ ನಂಗೆ ಏನೂ excuse ಕೊಡೊ ಹಾಗಿಲ್ಲ. ಇವತ್ತು ನೀನು ನಂಜೊತೆ ಮಾತಾಡೋಕೆ ಕೂತ್ಕೊಳ್ಳೆ ಬೇಕು. ಮನಸು ಹಗುರ ಆಗೋ ತನಕ..
ನಿನ್ನ ಮಾತು ಕೇಳೋಕೆ ಬರ್ತೀನಿ. ನೀನು ಮಾತಾಡ್ತಿಯ ಅನ್ನೋ ಆಸೆಯಿಂದ.
Monday, June 21, 2010
ನಾನಿಲ್ಲವೇ...
Tuesday, June 8, 2010
ನೆನಪಿನ ಅಲೆ
ತಂಪು ಮಳೆ ಹನಿಯೊಂದು ಮೈಸೋಕಿ ಎಚ್ಚೆತ್ತೆ. ಗಾಳಿ ಮೆಲ್ಲಗೆ ತಂಪಾಗಿ ಬೀಸುತಿತ್ತು. ತನ್ನ ಜೊತೆ ಅದ್ಯಾವುದೋ ಮರೆತ ನೆನಪನ್ನು ತಂದಂತೆ ಅನಿಸುತಿತ್ತು. ಅಲೆಗಳತ್ತ ಕಣ್ಣು ಹಾಯಿಸಿದೆ. ಅಲೆಗಳ ಬಡಿತ ಎಂದಿನಂತಿಲ್ಲ ಅನಿಸಿತು. ಪ್ರತಿ ಅಲೆಯೂ ವಿಶೇಷವಾಗಿದೆ ಅನಿಸತೊಡಗಿತು. ಚಿಕ್ಕ ಅಲೆ, ಅತಿ ದೊಡ್ಡ ಅಲೆ, ಸಾಧಾರಣವಾದ ಅಲೆ, ಬಂಡೆಗೆ ಬಡಿದು ಮೇಲೆ ಜಿಗಿಯುವ ಅಲೆ ಪ್ರತಿಯೊಂದೂ ಕೂಡ ನೆನಪುಗಳಂತೆ ವಿಭಿನ್ನ ಅನಿಸಿತು. ಪ್ರತಿಯೊಂದು ನೆನಪು ಕೂಡ ಅಲೆಯಂತೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆ. ಅಲೆಗಳು ತೀರಕ್ಕೆ ಬಂದು ಬಡಿಯುವಂತೆ, ನೆನಪುಗಳು ಮನಸಿನ ತೀರಕ್ಕೆ ಬಡಿಯುವುದು. ನೆನಪುಗಳಲ್ಲಿ ಕೆಲವೊಂದು ದೊಡ್ಡ ಅಲೆಗಳಂತೆ, ಮನಸಲ್ಲಿ ಬಹುಕಾಲ ಉಳಿಯುವಂತಹುದು. ಇನ್ನು ಕೆಲವು ಮರು ಕ್ಷಣವೇ ಮರೆಯುವಂತಹುದು. ಪ್ರತಿ ಕ್ಷಣವೂ, ಮರುಕ್ಷಣವೇ ನೆನಪಾಗಿ ಬದಲಾಗುತ್ತವೆ. Wednesday, June 2, 2010
ಬೆಳಗಿನ ಸಮಾಚಾರ
ಆ ಮೇಲಿನ 30 ನಿಮಿಷದಲ್ಲಿ ಉಸಿರಾಡಲೂ ಕೂಡ ಮರೆತು ಹೋಗುವಷ್ಟು occupied ಆಗಿಬಿಡ್ತೀನಿ. ನಾನು ರೆಡಿ ಆಗಿ ಮನೆ ಬಾಗಿಲು ಹಾಕೊವಷ್ಟರಲ್ಲಿ ಮನಸು ಮುಂದಿನ ಒಂದು ನಿಮಿಷದ ಓಟಕ್ಕೆ ತಯಾರಾಗುತ್ತಿರುತ್ತದೆ. ಬಸ್ ಮಿಸ್ ಆಗೋದು ಬೇಡ ದೇವರೇ ಅಂದುಕೊಂಡು ಬೇಗ ಬೇಗ ಹೆಜ್ಜೆ ಹಾಕಿ ಬಸ್ ಸ್ಟ್ಯಾಂಡ್ ಗೆ ಬರೋವಷ್ಟರಲ್ಲಿ ಸುಸ್ತೋ ಸುಸ್ತು. ಅಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ಹಸಿರು ದೀಪಕ್ಕೆ ಕಾಯುವ ಆಫೀಸ್ ಬಸ್ ನ ನೋಡಿದಾಗ ದೇವರೇ ನನ್ನ ಪ್ರಾರ್ಥನೆ ಆಲಿಸಿ ಕೆಂಪು ದೀಪ ಹಾಕಿದಾನೆ ಅನ್ನಿಸೋದು. Tuesday, June 1, 2010
ಸುಮ್ಮನೆ..
ಹೇಳು..
ಕಾಣದ ಕನಸನ್ನು ಮಡಿಲಲ್ಲಿಟ್ಟು, ಕನಸಿಗೆ ಚೈತನ್ಯ ತಂದವನು ನೀನು. ಆ ಕನಸಲ್ಲಿ ನನ್ನನ್ನೇ ಮರೆತವಳು ನಾನು. ಪ್ರೀತಿಯನ್ನು ದೂರ ತಾರೆ ಅಂದುಕೊಂಡವಳು ನಾನು. ಮಿನುಗುವ ತಾರೆಗಳ ನಡುವೆ ನಗುವ ಚಂದಿರ ನೀನು. ನನಗೇ ತಿಳಿಯದೆ ನನ್ನನ್ನು ಸೋಲಿಸಿದ ಚೆಲುವ ನೀನು. ಬರಡಾಗಿದ್ದ ಹೃದಯದಲ್ಲಿ ಒಲವಿನ ಮಳೆಹನಿ ಚಿಮುಕಿಸಿದವನು ನೀನು. ಪ್ರೇಮದ ಅಕ್ಕರೆ ತೋರಿದ ಗೆಳೆಯ ನೀನು. ನೋವಿಗೆ ಹೆಗಲು ನೀಡಿದ ಸ್ನೇಹಿತ ನೀನು. ಕಾಳಜಿ ತೋರಿದ ಸಂಗಾತಿ ನೀನು. Wednesday, May 12, 2010
ನಿನ್ನ ಸವಿನೆನಪೇ..
ನಿನಗೋಸ್ಕರ ಬರೆದಿರೋ ನನ್ನ ಡೈರಿಯಲ್ಲಿ ಮೊದಲ ಪುಟದ ಮೊದಲ ಪದಗಳಿವು. ಈ ಹಾಡು ಮೊದಲಿನಿಂದನೂ ಇಷ್ಟ ಆಗ್ತಾ ಇತ್ತು. ಅಮ್ಮ ಹೇಳಿ ಕೊಟ್ಟಿರೋ ಹಾಡು ಇದು. ನೀನು ಬಂದ ಮೇಲೆ ಇನ್ನು ಜಾಸ್ತಿ ಇಷ್ಟ ಆಗ್ತಿದೆ. ನಿನಗೋಸ್ಕರ ಯಾವಾಗಲೂ ಹಾಡಬೇಕು ಅನ್ಸುತ್ತೆ. ಬೆಳಿಗ್ಗೆ ಗಡಿಬಿಡಿಯಲ್ಲಿ ನಿಂಗೆ ಸರಿಯಾಗಿ bye ಹೇಳೋಕ್ಕೂ ಆಗ್ಲಿಲ್ಲ. ಆಫೀಸಿಗೆ ಬಂದು ಅದೇ ಯೋಚನೆಯಲ್ಲಿ ಬೇಜಾರಾಗ್ತಾ ಇರುತ್ತೆ. ಏನಾದ್ರು ಬರೆಯೋಣ ಅಂದ್ರೆ ನಿನ್ನ ವಿಷಯ ಬಿಟ್ರೆ ಬೇರೆ ಏನು ಸಿಗಲ್ಲ. ನಿಂಗೊತ್ತಾ ನಿನ್ನ ಬಗ್ಗೆ ಬರೆಯೋದೇ ನಂಗಿಷ್ಟ. ನೆನಪಿದೆಯ ನಿಂಗೆ? ಅವತ್ತು ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಇಬ್ರು ಕೂತ್ಕೊಂಡು ಮಾತಾಡ್ತಾ ಇದ್ದಿದ್ದು? ಮಾತಾಡೋಕ್ಕೆ ಆಗ್ತಿರ್ಲಿಲ್ಲ ನನ್ನಿಂದ. ಗಂಟಲು ಕಟ್ಟಿ ಬಂದು ಹೇಳಬೇಕಗಿರೋದನ್ನೆಲ್ಲ ನುಂಗಿದ್ದೆ. ಅವತ್ತೇ ಕೊನೆ ನೀನು ಚೆನ್ನೈಗೆ ಹೋಗೋ ಮುಂಚೆ Terrace ಮೇಲೆ ಕೂತ್ಕೊಂಡಿದ್ದು. ನಂತರ ಒಂದು ದಿನ ನೀನು ಪಕ್ಕದಲ್ಲೇ ಪಿಸುಗುಟ್ಟಿದ್ದೆ, ಇನ್ಮುದೆ ಚೆನ್ನೈಗೆ ಹೋಗೋ ಹಾಗಿಲ್ಲ ಅಂತ. ಅವತ್ತೇ ನಾನು ತೀರ್ಮಾನ ಮಾಡಿದ್ದು, ಇನ್ಮುಂದೆ ನಮ್ಮ ಮಧ್ಯ ದೂರ ಅನ್ನೋದೇ ಬರಬಾರದು ಅಂತ. ನಿನ್ನ ಸಾಮಿಪ್ಯವೇ ನನ್ನ ನೆಮ್ಮದಿ. Tuesday, May 11, 2010
ಜೀವನ..
Wednesday, April 28, 2010
ನಿನ್ನನ್ನ ಎಷ್ಟು ಮಿಸ್ ಮಾಡ್ಕೊಂಡೆ ಅಂತ ಈಗ ನೆನೆಸಿಕೊಂಡರೆ ಒಂದು ಪುಟ್ಟ ಮಂದಹಾಸ ಮೂಡುತ್ತೆ ಮುಖದಲ್ಲಿ. ನಿನ್ನ ಸನಿಹದ ನೆನಪಲ್ಲಿ ಮೈಮರೆಯುತ್ತಿತ್ತು ಮನಸು. ಈಗ ನಿನ್ನ ಸನಿಹದಲ್ಲೇ ಮೈಮರೆಯುತ್ತೆ. ನಿನ್ನ ನೆನಪುಗಳ ಒಂದು ಅಮೂಲ್ಯ ಭಂಡಾರವೇ ಇದೆ ಮನಸ್ಸಲಿ. ಅದು ಹನಿಯುವ ಜೇನಿನಂತೆ. ಆಗಾಗ ಅದನ್ನು ಸವಿಯುವುದು ನನಗೆ ತುಂಬ ಇಷ್ಟವಾದ ಕೆಲಸಗಳಲ್ಲಿ ಒಂದು. ಎಷ್ಟು ಸಲ ನೆನೆಸಿಕೊಂಡರೂ ಪ್ರತಿ ಸಲ ಒಂದು ಹೊಸ ಚೈತನ್ಯ ಕೊಡುತ್ತೆ. ನಿನ್ನ ನೋಡಲು ಒದ್ದಾಡುತ್ತಿದ್ದ ಮನಸ್ಸು ಈಗ ಒಂದು ಹಿತವಾದ ಭಾವನೆಯಲ್ಲಿ ಸಂಭ್ರಮಿಸುತ್ತಿದೆ. ನೆನಪುಗಳು ನೆನಪಾಗಿಯೇ ಉಳಿಯಲಿ. ಮತ್ತೆ ನಿನ್ನಿಂದ ದೂರ ಇದ್ದು ಬದುಕುವ ಶಕ್ತಿ ಇಲ್ಲ. ನಿನ್ನ ಸನಿಹ ಯಾವಾಗಲೂ ಹೀಗೆ ಇರಲಿ. ಹೊಸ ಹೊಸ ಬಣ್ಣಗಳ ಭಾವನೆಗಳು ದಿನವೂ ಚಿಮ್ಮುತ್ತಿರಲಿ. ಈ ಸಂತೋಷ, ಧನ್ಯತಾ ಭಾವ ನಿರಂತರವಾಗಿರಲಿ.Sunday, April 25, 2010
ನಿನ್ನೊಂದಿಗೆ ಮೊದಲ ಮಳೆ..
ಅವ್ಯಕ್ತ ಸಂತೋಷ, ಸಂತೃಪ್ತ ಮನಸು ಇವುಗಳ ನಿಜವಾದ ಅರ್ಥ ಇವಾಗ್ಲೇ ಅರ್ಥ ಆಗ್ತಿರೋದು. ನಿನ್ನ ಹತ್ರ ಹೇಳ್ಲಿಕ್ಕೆ ಆಗ್ತಿಲ್ಲ ಅದೆಷ್ಟು ಖುಷಿ ಇದೆ ಮನಸಲ್ಲಿ ಅಂತ. ಇನ್ನು ಮುಂದೆ ಯಾವಾಗಲೂ ನನ್ನ ಬಳಿ ಇರ್ತಿಯ ಅನ್ನೋ ಭಾವನೆ ಅದೆಷ್ಟು ಚಂದ. ಮೊನ್ನೆ ಕನಸಲ್ಲಿ ಬಂದ ಹೂವಿನ ಕಾಮನ ಬಿಲ್ಲಿನಂತೆ. ಬಾ ನನ್ನ ಕನಸಲ್ಲಿ, ನಿನಗೂ ತೋರಿಸ್ತೀನಿ ಅದು ಹೇಗಿದೆ ಅಂತ.
ಮಳೆ ಬಂದಾಗ curtains ಯಾಕೆ ತೆಗಿತೀನಿ ಗೊತ್ತಾ, ನಿಂಜೊತೆ ಮಳೆ ನೋಡ್ತಾ, ನಿನ್ನ ಕೈ ಹಿಡಿದು, ಏನನ್ನು ಕೂಡ ಮಾತಾಡದೆ ಕೂತ್ಕೊಬೇಕು ಅನ್ನೋದು ಅದೆಷ್ಟು ದಿನದ ಆಸೆ. ಈ ಮಳೆ ನನ್ನಲ್ಲಿ ಅದೆಲ್ಲೋ ಬಚ್ಚಿಟ್ಟ, ಬಣ್ಣ ಬಣ್ಣದ ಭಾವನೆಗಳನ್ನು ಬಡಿದೆಬ್ಬಿಸಿ, ತನ್ನ ತುಂತುರು ಹನಿಗಳನ್ನು ಮನಸಿಗೆ ಚಿಮುಕಿಸಿ, ಯಾಕೋ ನನ್ನನ್ನು ನಿನ್ನ ಹತ್ತಿರಕ್ಕೆ ಅಲ್ಲ, ನಿನ್ನೋಳಗೆನೆ ತಂದು ಬಿಡುತ್ತದೆ. ಇಷ್ಟೆಲ್ಲಾ ಮಾಡುವ ಅದನ್ನು ಪ್ರೀತಿಸದೇ ಇನ್ನೇನು ಮಾಡಲಿ. ನಿನಗೆ ಸಂಬಂಧಪಟ್ಟ ಪ್ರತಿಯೊಂದು ಕ್ಷಣವೂ ಕೂಡ ನನಗೆ ಆಪ್ತ, ಆತ್ಮೀಯ. ನನ್ನ ಹಳೆಯ ಮೊಬೈಲ್ ಹಾಳಾದಾಗ ಅದ್ಯಾಕೆ ಸಂಕಟ ಆಯಿತು ಗೊತ್ತಾ, ನಮ್ಮ ಮೊದಲ ಮತ್ತು ಆಮೇಲಿನ ಭೇಟಿಯ ಪ್ರತಿ ನೆನಪು ಅದರಲ್ಲಿತ್ತು. ಆದರೂ ಆ ಭೇಟಿಯ, ಮಾತಿನ ಪ್ರತಿಯೊಂದು ಎಳೆಯೂ ಕೂಡ ಮನಸಲ್ಲಿ ಇನ್ನೂ ಕೂಡ ಈಗಷ್ಟೇ ಅರಳಿದ ಹೂವಂತಿದೆ. ಈ ಹೂವಿಗೆ ಬಾಡುವುದೇ ಗೊತ್ತಿಲ್ಲ. ಅದು ಯಾವಾಗಲೂ ನನ್ನೊಳಗೆ ಹೀಗೆ ನಿನ್ನ ಘಮ ಇಡುವುದು. ಕೊನೆಯುಸಿರಿನ ತನಕವೂ. ಅದರ ನಂತರವೂ.
ಬಾ ಇವತ್ತು ಸಂಜೆ ಮಳೆಯಲಿ ನೆನೆಯೋಣವೇ..? ಒದ್ದೆ ನೆಲದ ಮೇಲೆ ಒದ್ದೆ ಕಾಲುಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕೋಣವೆ..? ಮನಸನ್ನು ಪೂರ್ತಿ ಒದ್ದೆಯಾಗಿಸಿ, ಒಬ್ಬರೊಬ್ಬರ ಮೇಲೆ ಭಾವನೆಗಳ ಬಣ್ಣಗಳನ್ನು ಎರಚೋಣವೇ..?
ನಿನ್ನವಳು..
Wednesday, March 3, 2010
ನಿನ್ನ ನೋಡೋ ಆಸೆಯಲಿ..

ನಿನ್ನವಳು..
Friday, February 5, 2010
ನೆನಪು ಮತ್ತು ನೀನು

ನಿನ್ನನ್ನು ನೆನೆಸುವ ಇನ್ನೊಂದು ದಿನ ಕಣ್ಣ ಮುಂದೆ. ನೀನಿಲ್ಲದೆ ಹೇಗೆ ಕಳೆಯಲಿ ಎಂದು ಇಂದಾದರೂ ತಿಳಿಸುವೆಯಾ?
ನಾವು ಕೈಬೆಸೆದು ನಡೆದ ಹಾದಿಯಲ್ಲಿ ನಿನ್ನ ಹೆಜ್ಜೆ ಗುರುತುಗಳನ್ನು ಹುಡುಕುತ್ತಿರುವೆ. ಕೈಗಳಲಿ ನಿನ್ನ ಬೆಚ್ಚನೆಯ ಕೈಹಿಡಿತದ ಬಿಸಿಯನ್ನು ಅರಸುತ್ತಿರುವೆ. ನನ್ನಲ್ಲಿ ಇರುವುದು ಮೂರೇ ಮೂರು ಆಸ್ತಿ. ನಿಂಜೊತೆ ಕಳೆದ ಕ್ಷಣಗಳು, ನೀನಿಲ್ಲದೆ ಒಂಟಿಯಾಗಿ ಕಳೆದ ಕ್ಷಣಗಳು, ಹಾಗೂ ಎದೆ ತಾಕಿದ ನಿನ್ನ ಪ್ರೀತಿ. ಪ್ರೀತಿ ಎದೆಯಾಳದಲ್ಲಿ ಬೇರೂರಿ ಹೆಮ್ಮರವಾಗಿ ಬೆಳೆದಿದೆ, ನಿನ್ನ ಪ್ರೀತಿ ಮಳೆಹನಿಯಲ್ಲಿ ಇನ್ನೂ ಬೆಳೆಯುತ್ತಿದೆ. ಒಂಟಿಯಾಗಿ ಕಳೆದ ಕ್ಷಣಗಳಲ್ಲಿ ನೀನಿಲ್ಲವೆಂದುಕೊಳ್ಳಬೇಡ. ನನ್ನಲ್ಲಿರುವುದು ಬರೀ ನೀನು. ಇರುವ ಒಂದು ಕೊರತೆಯೆಂದರೆ, ನಿನ್ನ ನೆನೆಸಿಕೊಳ್ಳದ ಕ್ಷಣಗಳ ಕೊರತೆ. ನಿನ್ನ ಹೆಜ್ಜೆಗುರುತಿನ ಹುಡುಕಾಟ ನಡೆಸುವಾಗಲೂ, ನೀನೂ ಕೂಡ ನನ್ನೊಡನೆ ಹುಡುಕುತ್ತಿದ್ದಿಯ ಅನಿಸುತ್ತದೆ. ಕಾಣದ ನಿನ್ನನ್ನು ತಬ್ಬಿಕೊಳ್ಳೋಣ ಅನಿಸುತ್ತದೆ. ಆಗಲೇ ಬರೋದು ಆ ಅತೀವ ನೋವು. ಎದೆ ಹಿಂಡುವ ಸಂಕಟ. ಹೀಗೆ ಶೂನ್ಯದಿಂದ ಮೌನದೆಡೆಗೆ ಅಲೆಯುತ್ತಲೇ ಇರುತ್ತಿದ್ದೇನೆ.
ನಿನ್ನ ನೆನಪನ್ನೇ ಇಷ್ಟೊಂದು ಪ್ರೀತಿಸುತ್ತಿರುವಾಗ, ಇನ್ನು ನಿನ್ನನ್ನು ಹೇಗೆ ಪ್ರೀತಿಸದಿರಲಿ? ಮೌನದಲ್ಲಿ ಕೇಳಿಸುವುದು ನಿನ್ನದೇ ಮಾತು, ನಿನ್ನದೇ ಪ್ರತಿಧ್ವನಿ. ಆಟವಾಡುವ ಮನಸ್ಸಿಗೆ ಪ್ರೀತಿಯ ಗಂಭೀರತೆಯನ್ನು ನೀಡಿದವನು ನೀನು. ಮೌನದಲ್ಲೇ ನಿನ್ನೊಂದಿಗೆ ಹರಟುವ ಕಲೆಯನ್ನು ನಾನು ಕಲಿತಾಗಿದೆ. ಈ ಪ್ರೀತಿ ತೀವ್ರತೆಯನ್ನು ಹೇಗೆ ತಿಳಿಸಲಿ ನಿನಗೆ? ವ್ಯಕ್ತವಾಗದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವೆಯ?
ಕಣ್ಮುಚ್ಚು, ನಾ ಬರುವೆ ಎನ್ನುತ್ತಿಯ?? ಹಾಗಿದ್ದರೆ ಮುಚ್ಚಿದ ಕಂಗಳಲಿ ಜೀವನ ಕಳೆಯಲೂ ನಾ ತಯಾರು. ಹೀಗೆ ಇಲ್ಲಿ, ಅಲ್ಲಿ, ಎಲ್ಲೆಲ್ಲೂ ನೀನಿರುವಾಗ ನಿನ್ನ ಹುಡುಕಬೇಕೆ ನಾನು? ಕಣ್ಮುಚ್ಚಿದಾಗ ಕಂಡಿದ್ದು ನೀನು ಮತ್ತು ನೀ ಹಿಡಿದ ಕೆಂಪು ಗುಲಾಬಿ. ನನಗಾಗಿ ತಂದಿರುವೆಯಲ್ಲ? ಬೇಗನೆ ನೀಡು. ಮನಸನ್ನು ನೀ ಕೊಟ್ಟ ಹೂದಳಗಳಲ್ಲಿ ಶ್ರಂಗರಿಸಬೇಕೆಂದಿರುವೆ. ನಿನ್ನೆಲ್ಲ ಸವಿನೆನಪು ಹೀಗೆ ಹಸಿರಾಗಿರಲಿ. ಪ್ರೀತಿ ಬಳ್ಳಿಗೆ ಕೋಟಿ ಚಿಗುರು ಮೂಡಲಿ. ಎರಡು ತೀರ ಯಾನ ಬಹುಬೇಗ ಕೊನೆಯಾಗಲಿ..
ನಿನ್ನ ನಿರೀಕ್ಷೆಯಲಿ..
ನಾನು.
Monday, February 1, 2010
ಪ್ರೀತಿ ಪರಿ..

ಪ್ರೀತಿ ಅದೆಷ್ಟು ಮುಗ್ಧ. ತನ್ನವನ ಬಗ್ಗೆ ಸಾವಿರ ಕನಸುಗಳನ್ನು ಕಟ್ಟಿ, ಅವೆಲ್ಲವನು ಕಣ್ಣೊಳಗೆ ಬಚ್ಚಿಟ್ಟು, ಅವನಿಗೋಸ್ಕರ ಕಾಯುವ ಪರಿ. ಬಚ್ಚಿಟ್ಟ ಪ್ರತಿಯೊಂದು ಕನಸನ್ನು ಅವನೆದುರು ಬಿಚ್ಚಿಟ್ಟು ಹಂಚಿಕೊಳ್ಳುವ ಪರಿ. ಅವನ ಬಾಹುಗಳಲ್ಲಿ ಬಂಧಿಯಾಗಿ, ಬಾನಿನಲ್ಲಿ ಯಾವುದೋ ಕಾಣದ ತಾರೆಯನ್ನು ದಿಟ್ಟಿಸುತ್ತಾ ತಾನೆಷ್ಟು ಸುಖಿ ಅಂದುಕೊಳ್ಳುವ ಪರಿ. ಅವನ ಹಿಂದೆ ಮುಂದೆ ಯಾವಾಗಲೂ ಓಡಾಡುತ್ತ ಇರಬೇಕು ಅಂದುಕೊಳ್ಳುವ ಪರಿ. ಅವನ ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತು ಹೇಗೆ ಕಾಣಿಸ್ತಿದಿನಿ ಎಂದು ನೋಡಿಕೊಳ್ಳುವ ಪರಿ. ಅವನ ಬಟ್ಟೆ ಘಮವನ್ನು ಆಸ್ವಾದಿಸುವ ಪರಿ. ಅವನ್ನು ನೋಡಲೇಬೇಕೆಂದು ಹಠ ಹಿಡಿಯುವ ಪರಿ. ನೋಡಿದೊಡನೆ ಎದೆ ಹೊಡೆದುಕೊಳ್ಳುವ ಪರಿ. ಕ್ಷಣವೇ ಅಪ್ಪಿಕೊಳ್ಳೋಣ ಎಂದು ಅನಿಸುವ ಪರಿ. ಹುಚ್ಚುತನ ಅನಿಸಿದರೂ ಅವನಿಗೋಸ್ಕರ ಏನಾದರು ಮಾಡುವ ಪರಿ.
ಪ್ರೀತಿ ಯಾವತ್ತೂ ನಿಂತ ನೀರಲ್ಲ. ಸದಾ ಹರಿಯುವ ನದಿ. ಪ್ರೀತಿಗೆ ಗೆರೆ ಎಳೆದು, ಇಷ್ಟೇ ಪ್ರೀತಿ ಮಾಡಲು ಸಾಧ್ಯ, ಇದರಾಚೆಯ ಪ್ರಪಂಚ ಪ್ರೀತಿಗೆ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಕಾಲಕ್ರಮೇಣ ಪ್ರೀತಿ ಪ್ರಬುದ್ಧತೆ ಪಡೆಯಬಹುದೇ ಹೊರತು, ನಿಂತ ನೀರಂತೆ ಆಚಲಿತವಾಗಲ್ಲ. ಪ್ರತಿ ಹೆಣ್ಣು ತನ್ನ ಹುಡುಗನಲ್ಲಿ ಹುಚ್ಚು ಪ್ರೀತಿ ನೋಡಬಯಸುತ್ತಾಳೆ. ತನ್ನನ್ನು ಮಿತಿ ಮೀರಿ ಪ್ರೀತಿಸಬೇಕು ಎಂದು ಬಯಸುತ್ತಾಳೆ. ಪ್ರತೀ ನೋಟದಲ್ಲೂ ಪ್ರೀತಿ ಹುಡುಕುತ್ತಾಳೆ. ಪ್ರತೀ ಮಾತಲ್ಲೂ ಪ್ರೀತಿ ನಿರೀಕ್ಷಿಸುತ್ತಾಳೆ. ತನ್ನೊಡನೆ ಕಷ್ಟವನ್ನು, ಸುಖವನ್ನು ಹಂಚಿಕೊಳ್ಳಬೇಕೆಂದು ಇಷ್ಟ ಪಡುತ್ತಾಳೆ.
ಯಾಕಿಷ್ಟು ಪೀಠಿಕೆ? ಹೇಳಬೇಕಾಗಿದ್ದು ಒಂದೇ ಒಂದು. ಕೊನೆಯುಸಿರು ಇರುವವರೆಗೂ ಅವನಿಂದ ಹುಚ್ಚು ಪ್ರೀತಿ ಬಯಸುತ್ತಿದೆ ಈ ಹುಚ್ಚು ಮನಸು. ಅವನ ಒಮ್ಮೆ ನೋಡಲು ಹಂಬಲಿಸುತ್ತಿದೆ ಈ ಹುಚ್ಚು ಮನಸು.
ಅವನಿಲ್ಲೇ ನನ್ನೊಳಗೆ ಇರುವನು. ಕದಡಿದ ಮನಕ್ಕೆ ಸಾಂತ್ವನ ನೀಡುವನು.
Monday, January 18, 2010
ಉತ್ತರವಿದೆಯೇ ಪ್ರೆಶ್ನೆಗಳಿಗೆ?

ಗೆಳೆಯ,
ನೀನೆಲ್ಲಿರುವೆ? ಇಷ್ಟು ದಿನ ಪ್ರತಿ ಕ್ಷಣವೂ ನಿನ್ನ ನೂರು ನಿರೀಕ್ಷೆಯಲಿ ಬದುಕಿರುವೆ. ಮನಕ್ಕೆ ಕವಿದ ಮೋಡವ ಸರಿಸುವೆಯ? ಕಣ್ಣೀರ ಒರೆಸಿ ಮನಕ್ಕೆ ಬೆಳಕ ತುಂಬುವೆಯ? ಅಕ್ಕರೆಯಲಿ ಹಣೆಗೆ ಹೂಮುತ್ತನ್ನು ಇಡುವೆಯ? ಬೆರಾರಿಗೊಸ್ಕರ ಅಲ್ಲ. ನನಗೊಸ್ಕರವೂ ಅಲ್ಲ ಗೆಳೆಯ, ನಿನಗೋಸ್ಕರ ಒಮ್ಮೆ ನನ್ನ ಮನಸಾರೆ ಪ್ರೀತಿಸುವೆಯ?
ಮನಸು ಹಠ ಮಾಡಿದರೆ ರಮಿಸುವೆಯ? ನೋವಾದರೆ ನನ್ನ ಸಂತೈಸುವೆಯ? ನನ್ನ ನೋಡುವ ತವಕವ ನಿನ್ನ ಕಂಗಳಲಿ ತುಂಬಿಕೊಳುವೆಯ? ಎಡೆಬಿಡದೆ ನನ್ನ ನೆನೆಸಿಕೊಳ್ಳುವೆಯ? ನನಗೋಸ್ಕರ ಸಡಗರದಿಂದ ಕಾಯುವೆಯ? ನಾ ಅತ್ತರೆ ನನಗೋಸ್ಕರ ಅಳುವೆಯ? ನನ್ನ ಮಿತಿಮೀರಿ ಪ್ರೀತಿಸುವೆಯ? ನನಗೋಸ್ಕರ ಅಲ್ಲ ಗೆಳೆಯ, ನಿನಗೋಸ್ಕರ ಒಮ್ಮೆ ನನ್ನ ಮನಸಾರೆ ಪ್ರೀತಿಸುವೆಯ?
ನಾವು ಜೊತೆಯಲ್ಲಿದ್ದ ಕ್ಷಣಗಳನ್ನ ನೆನೆಸಿಕೊಳ್ಳುವೆಯ? ನನ್ನ ಮುಂಗೈಗೆ ಮುತ್ತನ್ನಿತ್ತು ನನ್ನ ಬರಸೆಳೆದು ಅಪ್ಪಿಕೊಳ್ಳುವೆಯ? ಅಕ್ಕರೆಯಲಿ ನನ್ನ ಮುಂಗುರುಳ ಸರಿಸುವೆಯ? ಕಣ್ಣೀರು ಬರೋ ತನಕ ನನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುವೆಯ? ನನ್ನ ಪ್ರೀತಿಸುವೆಯ? ನನಗೋಸ್ಕರ ಅಲ್ಲ ಗೆಳೆಯ, ನಿನಗೋಸ್ಕರ ಒಮ್ಮೆ ನನ್ನ ಮನಸಾರೆ ಪ್ರೀತಿಸುವೆಯ?
Thursday, January 7, 2010
ಕಾಯುತಿರುವೆ ನಿನ್ನ ನೆನಪಲಿ..

Wednesday, January 6, 2010
ನೀ ನನ್ನ ಮನದ ಚಂದಿರ..

ಮನದ ಮೆಟ್ಟಿಲಿನ ಮೇಲೆ ನಿನ್ನ ಹೆಜ್ಜೆ ಗುರುತು...

ನಿನ್ನ ಮನದನ್ನೆ...









